ಡೈಲಿ ವಾರ್ತೆ: 12/JAN/2025
ಕೋಟ ಮೂರ್ತೆದಾರರ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ ಹಾಗೂ ದಿ.ಎಸ್. ಬಂಗಾರಪ್ಪ ಸ್ಮಾರಕ ಸಭಾ ಭವನ ಲೋಕಾರ್ಪಣೆ:
ವಿದ್ಯೆಯ ಮೂಲಕ ಸಮಾಜದ ಉನ್ನತಿ – ಸಚಿವ ಕೆ.ಎನ್ ರಾಜಣ್ಣ
ಕೋಟ: ಶೋಷಣೆಯ ವಿರುದ್ಧ ಹಾಗೂ ಜನಪರ ಕಾಳಜಿಗೆ ಹೋರಾಟ ಮೂಲಕ ಉತ್ತರ ಸಿಗುತ್ತದೆ ಇದಕ್ಕೆ ಮೂರ್ತೆದಾರರ ಸಂಘವೇ ನಿದರ್ಶನ ಎಂದು ರಾಜ್ಯದ ಸಹಕಾರ. ಸಚಿವ ಕೆ.ಎನ್ ರಾಜಣ್ಣ ನುಡಿದರು.
ಭಾನುವಾರ ಕೋಟದ ಮೂರ್ತೆದಾರರ ಸಹಕಾರಿ ಸಂಘದ 34ನೇ ವರ್ಷಾಚರಣೆ ಹಾಗೂ ಸಂಘದ ಕೇಂದ್ರ ಕಛೇರಿಯ ಕಟ್ಟಡ ಲೋಕಾರ್ಪಣೆ, ಹಾಗೂ ದಿ.ಬಂಗಾರಪ್ಪ ಸಭಾಭವನ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ಗೌರವ ಸ್ವೀಕರಿಸಿ ಮಾತನಾಡಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯೆಗೆ ಮೊದಲ ಪ್ರಾಶಸ್ತ್ಯ ಇದ್ದು ಕುಲ ಕಸುಬು ಎಂಬುವುದನ್ನು ಬದಿಗೊತ್ತಿ ನಿಮ್ಮ ಮಕ್ಕಳನ್ನು ವಿದ್ಯೆಯ ಮೂಲಕ ಈ ಸಮಾಜದ ಉನ್ನತ ಹುದ್ದೆಗೆರಲು ಅವಕಾಶ ಕಲ್ಪಿಸಿ ಎಂದರಲ್ಲದೆ ಈ ಎಲ್ಲಾ ಹೊಣೆಗಾರಿಕೆಯಿಂದ ಪೋಷಕರು ನಿರಾಸಕ್ತಿ ತೋರದಂತೆ ಕಿವಿ ಮಾತು ಹೇಳಿದರು.
ಸಮಾಜದ ಆಸ್ತಿ ಯುವ ಸಮುದಾಯ ಆಗಿದ್ದು ಅವರುಗಳನ್ನು ಸದೃಢವಾಗಿಸಲು ಸಲಹೆ ನೀಡಿದರಲ್ಲದೆ ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದ್ದೇವೆ, ಅತಿ ಹಿಂದುಳಿದ ಸಮಾಜ ಇಂದು ಸಹಕಾರಿ ಕ್ಷೇತ್ರದ ಮೂಲಕ ಸ್ವಾವಲಂಬಿಯಾಗಿ ಮುಂಚೂಣಿಗೆ ನಿಲ್ಲುತ್ತದೆ ಇದಕ್ಕೆ ಗ್ರಾಮೀಣ ಹಳ್ಳಿಗಾಡಿನ ಪ್ರದೇಶದಲ್ಲಿ ಆರ್ಥಿಕ ಶಕ್ತಿಯಾಗಿ ನಿಂತ ಸಂಘಗಳೇ ಸಾಕ್ಷಿ, ಸಂಘಗಳು ಹುಟ್ಟು ಹಾಕುದು ಸುಲಭ ಆದರೆ ಅದನ್ನು ಸದೃಢ ಶಕ್ತಿಯಾಗಿ ಬೆಳೆಸುವುದು ಕಷ್ಟಕರ ಈ ನಿಟ್ಟಿನಲ್ಲಿ ಆಗಿನ ಮುಖ್ಯಮಂತ್ರಿ ಬಂಗಾರಪ್ಪನವರೇ ಪ್ರೋತ್ಸಾಹಿಸಿದ ಮೂರ್ತೆದಾರರ ಸಂಘಗಳು ಇಂದು ಹೆಮ್ಮರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಭೆಯ ಉದ್ದಕ್ಕೂ ಬಂಗಾರಪ್ಪನವರನ್ನು ಸ್ಮರಿಸಿದರು. ಭೂ ನ್ಯಾಯ ಮಂಡಳಿಯಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳನ್ನು ತ್ವರಿತವಾಗಿ ಮುಗಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು. ಈ ವೇಳೆ ಸಚಿವರಿಗೆ ನೀರಾ ದಿಂದ ತಯಾರಿಸಲಾದ, ಜಿಲ್ಲೆಯ ವಿಶೇಷ ಸಿಹಿಯಾದ ಓಲೆ ಬೆಲ್ಲವನ್ನು ನೀಡಿ ಗೌರವಿಸಲಾಯಿತು.
ಆಡಳಿತ ಮಂಡಳಿಯು ಎಸ್. ಬಂಗಾರಪ್ಪ ಸ್ಮರಣಾರ್ಥ ನಿರ್ಮಿಸಿದ ಭವ್ಯ ಸಭಾಂಗಣವನ್ನು ಉದ್ಘಾಟಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, 34 ವರ್ಷಗಳ ಹಿಂದೆ ಮೂರ್ತೆದಾರರ ಸಂಘ ಆರಂಭಿಸಲು ಕೇವಲ ಎರಡು ಸಾವಿರ ರೂ. ಕೊಡಿ ಎಂದು ಜನರನ್ನು ಕೇಳಿದಾಗ ಅನುಮಾನಪಟ್ಟವರೇ ಜಾಸ್ತಿ. ಆದರೆ, ಇಂದು ಮೂರ್ತೆದಾರರ ಸಂಘ ಕೋಟ್ಯಂತರ ರೂ. ಬಂಡವಾಳ, ಸ್ವಂತ ಕಟ್ಟಡ, ಹಲವು ಶಾಖೆಗಳನ್ನು ಹೊಂದಿದೆ. ತುರ್ತು ಸಾಲವನ್ನು ನೀಡುವ ಸಹಕಾರಿ ಸಂಘ ಎಂಬ ಹೆಗ್ಗಳಿಕೆ ಗಳಿಸಿದೆ. ಅಂದು ಬ್ಯಾಂಕ್ ಉದ್ಘಾಟನೆಗೆ ಕರೆದರೆ ಯಾವ ಸಾಧುಗಳೂ ಇದು ಶೇಂದಿ ಇಳಿಸುವವರ ಸಂಘ ಎಂದು ಬರಲೊಪ್ಪಲಿಲ್ಲ. ಇಂದು ಶೇಂದಿ ತೆಗೆಯುವವರಿಲ್ಲ. ಅಂದು ಆ ಕಸುಬಿನಲ್ಲಿ ಅಪಘಾತಾಕ್ಕೊಳಗಾಗಿದ್ದವರ ಮಕ್ಕಳಿಗೆ ಇಂದಿಲ್ಲಿ ಉದ್ಯೋಗ ದೊರೆತಿದೆ. ಮೂರ್ತೆದಾರರ ಸಂಘವು ಅತ್ಯಂತ ಕೆಳ ಸ್ಥರದ ಜನಾಂಗದವರು ತಮ್ಮ ಅಭಿವೃದ್ಧಿಗಾಗಿ ಕಟ್ಟಿಕೊಂಡ ಜಿಲ್ಲೆಯ ಏಕೈಕ ಸಹಕಾರಿ ಸಂಘ ಎಂದು ಸಂಘದ ಬೆಳವಣಿಗೆಯನ್ನು ಶ್ಲಾಘಿಸಿದರು.
ಗ್ರಾಹಕರ ಭದ್ರತಾ ಕೋಶವನ್ನು ಉದ್ಘಾಟಿಸಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ರಾಷ್ಟ್ರೀಕೃತ ಬ್ಯಾಂಕುಗಳು ವಿಲೀನ ಹೊಂದಿ ಸಣ್ಣ ಸಾಲಗಾರರಿಗೆ ತೊಂದರೆ ಉಂಟಾದ ದಿನಗಳಲ್ಲಿ ಸಹಕಾರಿ ಕ್ಷೇತ್ರಕ್ಕೆ ಪ್ರಾಮುಖ್ಯತೆ ಸಿಕ್ಕಿ ಬೆಳೆದಿದೆ. ಶೇಂದಿ ರದ್ದಾದ ಕಾರಣದಿಂದ ಸಂಕಷ್ಟಕ್ಕೊಳಗಾದ ಮೂರ್ತೆದಾರರಿಗೆ ಸರ್ಕಾರ ಪರ್ಯಾಯ ವ್ಯವಸ್ಥೆ ರೂಪಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ವಾಣಿಜ್ಯ ಸಂಕೀರ್ಣವನ್ನು ಉದ್ಘಾಟಿಸಿ, 2002 ರಲ್ಲಿ ಜಿಲ್ಲೆಯಲ್ಲಿ ತಾಳೆ ಬೆಲ್ಲ ಸೊಸೈಟಿ ಮುಚ್ಚಿದಾಗ ಮೂರ್ತೆದಾರರ ಆಗ್ರಹದಿಂದ ಸರ್ಕಾರ ಅನುದಾನ ಬಿಡುಗಡೆಗೊಳಿಸಿತು. ಸಹಕಾರಿ ಸಂಘದಿಂದ ಸಾಲ ಪಡೆದವರು ಸರಿಯಾಗಿ ಬಳಸಿ, ಮರುಪಾವತಿ ಮಾಡುವುದರಿಂದ ಗ್ರಾಹಕರಿಗೂ, ಸಂಘಕ್ಕೂ ಅಭಿವೃದ್ಧಿ ಉಂಟಾಗುತ್ತದೆ ಎಂಬ ಸಲಹೆ ನೀಡಿದರು.
ಶಾಸಕ ಕಿರಣ್ ಕುಮಾರ್ ಕೊಡ್ಗಿ ಭದ್ರತಾ ಕೊಠಡಿ ಉದ್ಘಾಟಿಸಿ ಶುಭಕೋರಿದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ‘ಸಂಭ್ರಮ’ ವಿಶೇಷ ನಗದು ಪತ್ರ ಬಿಡುಗಡೆಗೊಳಿಸಿದರು.
ಸಂಘದ ಕೇಂದ್ರ ಕಚೇರಿಯನ್ನು ಉದ್ಘಾಟಿಸಿದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ, ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್, ಕೋಟ ಮೂರ್ತೆ ದಾರರ ಸೇವಾ ಸಹಕಾರಿ ಸಂಘ 70 ಕೋಟಿ ರೂ. ಗಳಿಗೂ ಮಿಕ್ಕಿ ಠೇವಣಿ, 68 ಕೋಟಿ ರೂ. ಸಾಲ, 12ಶೇ. ಡಿವಿಡೆಂಡ್ ನೀಡಿ ಜನರ ಆರ್ಥಿಕ ಸಂಸ್ಥೆಯಾಗಿ ಬೆಳೆದಿದೆ. ಸ್ಥಳೀಯರ ಅಗತ್ಯಗಳು ಅವರ ಭಾಷೆ ಅರಿತು ನೆರವಾಗುವ ಕಾರಣದಿಂದ ಸಹಕಾರಿ ಸಂಘಗಳು ಇಂದು ರಾಷ್ಟ್ರೀಕೃತ ಬ್ಯಾಂಕುಗಳನ್ನೂ ಮೀರಿ ಬೆಳೆದಿವೆ. ಜಿಲ್ಲೆಯ ಸಂಘಗಳು ರಾಜ್ಯ, ರಾಷ್ಟ್ರ ಪ್ರಶಸ್ತಿಗಳನ್ನೂ ಗಳಿಸಿವೆ. ಆದ್ದರಿಂದಲೇ ಅವಿಭಜಿತ ದ. ಕ. ಜಿಲ್ಲೆಯಲ್ಲಿ ಯಾವ ಕೃಷಿಕನೂ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಹೇಳಿದರು.
ಕೋಟ ಮೂರ್ತೆ ದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಕೆ. ಕೊರಗ ಪೂಜಾರಿ ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವನೆ ಸಲ್ಲಿಸಿದರು.
ಸನ್ಮಾನ
ಸಭೆಯಲ್ಲಿ ಸಹಕಾರ ಸಚಿವ ಕೆ.ಎನ್ ರಾಜಣ್ಣ ,ದ.ಕ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ ಎನ್ ರಾಜೇಂದ್ರ ಕುಮಾರ್,ಮೂರ್ತೆದಾರ ಸಂಘದ ಅಧ್ಯಕ್ಷ ಕೊರಗ ಪೂಜಾರಿ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕೆಮ್ಮಣ್ಣು, ಬೆಂಗಳೂರಿನ ಗಣಪತಿ, ಕೋಟ ಮೂರ್ತೆದಾರರ ಸಂಘದ ಉಪಾಧ್ಯಕ್ಷ ಜಯರಾಮ್ ಪೂಜಾರಿ, ನಿರ್ದೇಶಕರುಗಳಾದ ಕೃಷ್ಣ ಪೂಜಾರಿ, ರಾಜು ಪೂಜಾರಿ, ಜಿ.ಸಂಜೀವ ಪೂಜಾರಿ, ಕೃಷ್ಣ ಪೂಜಾರಿ ಪಿ,ಮಂಜುನಾಥ ಪೂಜಾರಿ, ಭಾರತಿ, ಪ್ರಭಾವತಿ, ಶಾಖಾ ಸಲಹಾ ಸಮಿತಿಯ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ವೈಭವಪೂರಿತ ಮೆರವಣಿಗೆ:
ಕೋಟ ಅಮೃತೇಶ್ವರಿ ದೇಗುಲದಿಂದ ಹೊರಟ ವೈಭವದ ಮೆರವಣಿಗೆಗೆ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಅಧ್ಯಕ್ಷ ಡಾ.ಕೆ ಎಸ್ ಕಾರಂತ್ ಹಾಗೂ ಕೋಟ ಅಮೃತೇಶ್ವರಿ ದೇಗುಲದ ಅಧ್ಯಕ್ಷ ಅನಂದ್ ಸಿ ಕುಂದರ್ ಚಾಲನೆ ನೀಡಿದರು.
ಕೋಟ ದೇಗುಲದಿಂದ ಹೊರಟ ಮೆರವಣ ಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಘದ ಕಛೇರಿ ತಲುಪಿ ನಂತರ ಸಭೆ ನಡೆಯುವ ಕೋಟದ ಶಾಂಭವೀ ಶಾಲಾ ಮೈದಾನ ತಲುಪಿತು. ಮೆರವಣಿಗೆಯಲ್ಲಿ ಕೀಲುಕುದುರೆ, ಚಂಡೆ, ವಾದ್ಯ, ಕಳಶ ಹಿಡಿದ ಸಂಘದ ಸದಸ್ಯರು ವಿಶೇಷವಾಗಿ ಗಮನ ಸೆಳೆಯಿತು.
ಉಪಸ್ಥಿತಿ:
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರ, ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಕನ್ಯಾ ಜಗದೀಶ್ ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಕೋಟ ಅಮೃತೇಶ್ವರಿ ದೇಗುಲದ ಅಧ್ಯಕ್ಷ ಆನಂದ್ ಸಿ ಕುಂದರ್, ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ, ದ.ಕ ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲ ಮಂಗಳೂರು ಅಧ್ಯಕ್ಷ ಸಂಜೀವ ಪೂಜಾರಿ,ಜಿಲ್ಲಾ ಮೂರ್ತೆದಾರರ ಸಹಕಾರಿ ಮಂಡಲದ ಬ್ರಹ್ಮಾವರದ ಅಧ್ಯಕ್ಷ ಸತೀಶ್ ಉಪ್ಪೂರು, ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಂಬಧಕಿ ಸುಕನ್ಯಾ,ಉಡುಪಿ ಸಹಕಾರ ಸಂಘಗಳ ಉಪನಿಬಂಧಕಿ ಕೆ.ಆರ್. ಲಾವಣ್ಯ,ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು,ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಕೋಟ ಅಧ್ಯಕ್ಷ ಸದಾನಂದ ಪೂಜಾರಿ,ಕೋಟಿ ಚೆನ್ನಯ್ಯ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸಿದ್ಧಿ ಶ್ರೀನಿವಾಸ ಪೂಜಾರಿ,ಬ್ರಹ್ಮ ಶ್ರೀ ನಾರಾಯಣಗುರು ಮಹಿಳಾ ಸ್ವ ಸಹಾಯ ವಿವಿದ್ದೋಧೇಶ ಸಂಘದ ಅಧ್ಯಕ್ಷೆ ಸುಧಾ ಎ ಪೂಜಾರಿ, ಕುಂದಾಪುರ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ,ಉದ್ಯಮಿ ಇಬ್ರಾಹಿಂ ಸಾಹೇಬ್ ಕೋಟ, ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಪೂಜಾರಿ,ಉಡುಪಿ ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲದ ಬ್ರಹ್ಮಾವರದ ಮಾಜಿ ಅಧ್ಯಕ್ಷ ಪಿ.ಕೆ ಸದಾನಂದ, ಕೋಟ ಮೂರ್ತೆದಾರರ ಸಂಘದ ಉಪಾಧ್ಯಕ್ಷರು ನಿರ್ದೇಶಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕರಾದ ನರೇಂದ್ರ ಕುಮಾರ್ ಕೋಟ ,ಸತೀಶ್ ವಡ್ಡರ್ಸೆ ನಿರೂಪಿಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕೆಮ್ಮಣ್ಣು ಸ್ವಾಗತಿಸಿದರು.
ನಿರ್ದೇಶಕ ಕೃಷ್ಣ ಪೂಜಾರಿ.ಪಿ ವಂದಿಸಿದರು.
ಸಂಘದ ಸಿಬ್ಬಂದಿ ದಿನೇಶ್ ಪೂಜಾರಿ ಸಹಕರಿಸಿದರು.