ಡೈಲಿ ವಾರ್ತೆ: 18/JAN/2025
ಕೋಟ| ಸರ್ಕಾರಿ ರಸ್ತೆ ಅತಿಕ್ರಮಣ: ಬೆಳ್ಳಂಬೆಳಿಗ್ಗೆ ಜೆಸಿಬಿ ಘರ್ಜನೆ – ಬ್ರಹ್ಮಾವರ ತಹಸೀಲ್ದಾರ್ ನೇತೃತ್ವದಲ್ಲಿ ರಸ್ತೆಯ ಒತ್ತುವಾರಿ ತೆರವುಗೊಳಿಸಿ ರಸ್ತೆ ನಿರ್ಮಾಣ
ಕೋಟ: ಬ್ರಹ್ಮಾವರ ತಾಲೂಕಿನ ಕೋಟ ಹೋಬಳಿಯ ಮಣೂರು ಪಡುಕರೆಯ ಜಟ್ಟಿಗೇಶ್ವರ ದೇಗುಲದ ಸಮೀಪ ಸುಮಾರು 30ಕ್ಕೂ ಅಧಿಕ ಕುಟುಂಬಗಳು ರಸ್ತೆಯಿಂದ ವಂಚಿತರಾಗಿದ್ದು ಈ ಬಗ್ಗೆ ಇಲ್ಲಿನ ಸ್ಥಳೀಯರು ತಾಲೂಕು ದಂಡಾಧಿಕಾರಿಗೆ ದೂರು ನೀಡಿದ ಹಿನ್ನಲೆ ಶನಿವಾರ ತಹಶೀಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ ನೇತೃತ್ವದಲ್ಲಿ ಕಾನೂನಿನ ಚೌಕಟ್ಟಿನೊಂದಿಗೆ ದಿಢೀರ ಕಾರ್ಯಾಚರಿಸಿ ರಸ್ತೆ ನಿರ್ಮಾಣಗೊಂಡ ಘಟನೆ ನಡೆದಿದೆ.
ಪರಿಶಿಷ್ಟ ಜಾತಿ ಪಂಗಡ ಸೇರಿದಂತೆ ವಿವಿಧ ಸಮುದಾಯಗಳು ವಾಸ್ತವ್ಯವಿರುವ ಮೂವತ್ತಕ್ಕೂ ಅಧಿಕ ಮನೆಗಳು ರಸ್ತೆ ಸಮಸ್ಯೆ ಎದುರಿಸುತ್ತಿದ್ದವು.
ಈ ಬಗ್ಗೆ ಇಲ್ಲಿನ ನಿವಾಸಿ ಕೃಷ್ಣ ಬಂಗೇರ ಸೇರಿದಂತೆ ಹಲವರು ಸ್ಥಳೀಯಾಡಳಿತದ ಕದ ತಟ್ಟಿದರು.
ಸಮಸ್ಯೆ ಬಗೆಹರಿಸುದಕ್ಕೆ ಸ್ಥಳೀಯಾಡಳಿತ ಪ್ರಯತ್ನಿಸಿದರೂ ಆಟಕ್ಕುಂಟು ಲೆಕ್ಕಕ್ಕಿಲ ಎಂಬಂತೆ ಆಕ್ಷೇಪಿತ ದಲಿತ ಕುಟುಂಬಗಳ ಬೆದರಿಕೆ ತಂತ್ರದಿಂದ ಸ್ಥಳೀಯಾಡಳಿತ ಪ್ರಕರಣವನ್ನು ತಾಲೂಕು ದಂಡಾಧಿಕಾರಿಗಳ ಮೊರೆಹೋಗುವಂತೆ ನಿರ್ದೇಶನ ನೀಡಿತು.
ಈ ಬಗ್ಗೆ ಸ್ಥಳೀಯರು ತಾಲೂಕು ಆಡಳಿತಕ್ಕೆ ಮೊರೆಹೋಗಿದ್ದು ಇದರಿಂದ ಈ ಹೋರಾಟಕ್ಕೆ ಮತ್ತಷ್ಟು ವೇಗ ದೊರೆತ್ತಿದ್ದು ಶನಿವಾರ ಮುಂಜಾನೆ ವೇದಿಕೆ ಸೃಷ್ಠಿಯಾಗಿದೆ.
ಹೋರಾಟದ ಹಾದಿ ಏಳುಬೀಳು.
ಕೋಟ ಪಂಚಾಯತ್‌ನ ಮಣೂರುಪಡುಕರೆ 5 ನೇ ವಾಡ್೯ ಸಮುದ್ರ ತಟದ ಸಮೀಪ ವಾಸ್ತವ್ಯ ಹೊಂದಿದ ಅದೆಷ್ಟೋ ಕುಟುಂಬಗಳ ಗೋಳನ್ನು ಕಳೆದ ನಲವತ್ತು ವರ್ಷಗಳಿಂದ ಕೇಳುವರಿಲ್ಲದಾಗಿತ್ತು 1980ರ ಇಸವಿಯಲ್ಲೆ ಸರ್ವೆ ನಂ.304/8ರಲ್ಲಿ ೦.28ಎಕ್ಕರೆ ಸರಕಾರಿ ಅಧೀನಕ್ಕೊಳಪಟ್ಟ ಸ್ಥಳದಲ್ಲಿ ಸುಮಾರು ಒಂದು ಕಿ.ಮೀ ವರೆಗಿನ ಹದಿಮೂರು ಫೀಟ್ ಅಗಲದ ರಸ್ತೆಯನ್ನು ಪರಿಶಿಷ್ಟ ಕಾಲೋನಿಗೆ ಅನುಕೂಲಕ್ಕಾಗಿ ನಕ್ಷೆಯಾಗಿ ಪರಿವರ್ತಿಸಲಾಗಿದ್ದು ಈ ಬಗ್ಗೆ ಇಲ್ಲಿನ ಪರಿಶಿಷ್ಟ ಜಾತಿಯ ಒಂದೆರಡು ಕುಟುಂಬಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನಲ್ಲೆಯಲ್ಲಿ ರಸ್ತೆಯೇ ಮರಿಚಿಕೆಯಾಗಿ ಉಳಿದುಕೊಂಡಿತು.
ಈ ಹಿನ್ನಲ್ಲೆಯಲ್ಲಿ ಸ್ಥಳೀಯ ನಿವಾಸಿ ಕೃಷ್ಣ ಬಂಗೇರ ಮತ್ತು ತಂಡ ರಸ್ತೆ ನಿರ್ಮಾಣಕ್ಕಾಗಿ ಕಳೆದ ಸಾಕಷ್ಟು ವರ್ಷಗಳಿಂದ ಸ್ಥಳೀಯ ಪಂಚಾಯತ್ ಸದಸ್ಯರ ಸಮ್ಮುಖದಲ್ಲಿ ಹೋರಾಟದ ಹಾದಿ ತುಳಿದಿದ್ದರು.
ಇದರಿಂದ ಕೋಟ ಗ್ರಾಮಪಂಚಾಯತ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ಸ್ಥಳ ಪರಿಶೀಲಿಸಿ ರಸ್ತೆ ನಿರ್ಮಾಣಕ್ಕೆ ಮುಂದಾದರೂ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲ ಪರಿಶಿಷ್ಟ ಪಂಗಡದವರು ರಸ್ತೆ ನಿರ್ಮಾಣ ಆಗದಂತೆ ತಡೆಯೊಡ್ಡಿದ್ದರು. ಇದರೊಂದಿಗೆ ಈ ಯೋಜನೆ ನೆನೆಗುದ್ದಿಗೆ ಬಿದಿತ್ತು.
ತಾಲೂಕು ದಂಡಾಧಿಕಾರಿ ದಿಟ್ಟ ಕ್ರಮ:
ಇಲ್ಲಿನ ಪರಿಸರದ ಜನಸಾಮಾನ್ಯರ ಭವಣೆಗೆ ಕಾನೂನಾತ್ಮಕವಾಗಿ ಸ್ಪಂದಿಸಿದ ತಹಶಿಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ ಮತ್ತವರ ಅಧಿಕಾರಿಗಳ ತಂಡ ಇದಕ್ಕಾಗಿ ರೂಪುರೇಖೆ ಸಿದ್ಧಪಡಿಸಿ ಶನಿವಾರವೇ ಮುಹೂರ್ತ ಫಿಕ್ಸ್ ಮಾಡಿತು.
ಅದರಂತೆ ಕೋಟ ಕಂದಾಯ ಅಧಿಕಾರಿ ಮಂಜು ಬಿಲ್ಲವ ಹಾಗೂ ಗ್ರಾಮಲೆಕ್ಕಿಗ ಚಲುವರಾಜು, ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ, ಕೋಟ ಮೆಸ್ಕಾಂ ಪ್ರತಾಪ್ ಶೆಟ್ಟಿ, ಕೋಟ ಪೊಲೀಸ್ ಉಪನಿರೀಕ್ಷಕ ರಾಘವೇಂದ್ರ, ಎಸ್ಐ ಸುಧಾ ಪ್ರಭು, ಎಎಸ್ಐ ಜಯಪ್ರಕಾಶ್ ಹಾಗೂ ಸಿಬ್ಬಂದಿಗಳೊಳಗೊಂಡ ತಂಡದೊಂದಿಗೆ ಕಾರ್ಯಾಚರಣೆಗೆ ಧುಮುಕಿದರು.
ಮಾತಿನಚಕಮಕಿ
ರಸ್ತೆ ನಿರ್ಮಾಣ ಕಾರ್ಯ ಆರಂಭಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಆಕ್ಷೇಪಿತ ವ್ಯಕ್ತಿಗಳು ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಇಳಿದರು. ದಲಿತರನ್ನು ನಿರ್ಲಕ್ಷಿಸಿ ಈ ರೀತಿಯ ಕ್ರಮಗಳನ್ನು ಕೈಗೊಂಡಿದ್ದಿರಿ ಎಂದು ಆಕ್ಷೇಪಿಸಿ ತಹಶಿಲ್ದಾರ್ ವಿರುದ್ಧವೇ ಮೊಕದ್ದಮೆ ಹೂಡವುದಾಗಿ ಬೆದರಿಸಿದರು. ಈ ಬಗ್ಗೆ ಆಕ್ರೋಶ ಹೊರಹಾಕಿದ ತಹಶಿಲ್ದಾರ್ ಶ್ರೀಕಾಂತ್ ಹೆಗ್ಡೆ ಕಾನೂನಿನ ಮೂಲಕವೆ ರಸ್ತೆ ನಿರ್ಮಿಸುತ್ತಿದ್ದೇವೆ ಈ ಬಗ್ಗೆ ನಿಮ್ಮ ಆಕ್ಷೇಪ ಸಲ್ಲ ಇದೇ ರೀತಿ ಸಮಸ್ಯೆ ಸೃಷ್ಠಿಸಿದರೆ ನಿಮ್ಮ ಮೇಲೆ ಕರ್ತವ್ಯಲೋಪ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿ ರಸ್ತೆ ಕಾಮಗಾರಿಗೆ ವೇಗ ನೀಡಿದರು.
ಸಾಥ್ ನೀಡಿದ ಇಲಾಖೆ:
ಇದೇ ಮೊದಲ ಬಾರಿ ಎಂಬಂತೆ ಒಂದಿಷ್ಟು ಕುಟುಂಬಗಳು ಅದೆಷ್ಟೊ ವರ್ಷದಿಂದ ರಸ್ತೆ ಇಲ್ಲದೆ ಸೊರಗಿದ್ದು ಈ ಬಗ್ಗೆ ತಾಲೂಕು ಆಡಳಿತದ ದಿಟ್ಟ ಕ್ರಮಕ್ಕೆ ಸಂತಸ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿತು.ಅಲ್ಲದೆ ಕಾಮಗಾರಿಯಲ್ಲಿ ಕೋಟ ಗ್ರಾಮಪಂಚಾಯತ್, ಅರಣ್ಯ ಇಲಾಖೆ,ಮೆಸ್ಕಾಂ, ಪೋಲಿಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರವನ್ನು ತಹಶಿಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ ಸ್ಮರಿಸಿ ಸರಕಾರಿ ಸ್ಥಳವನ್ನು ಅತಿಕ್ರಮಣ ಮಾಡಿಕೊಂಡು ಒಂದಿಷ್ಟು ಮನೆಗಳಿಗೆ ರಸ್ತೆಯಿಂದ ವಂಚಿತಗೊಳಿಸಿದ್ದಾರೆ, ದಾಖಲೆಗಳಲ್ಲಿ ಪರಂಬಕ್ಕು ರಸ್ತೆ ಎಂಬ ದಾಖಲೆಗಳಿವೆ ಅದರಂತೆ ರಸ್ತೆ ನಿರ್ಮಿಸಿದ್ದೇವೆ ಇದರಿಂದ ಆ ಎಲ್ಲಾ ಕುಟುಂಬಗಳು ನಿರಾಳದಲ್ಲಿ ಸಂಚರಿಸುವಂತ್ತಾಗಿದೆ ಎಂದರು.