ಡೈಲಿ ವಾರ್ತೆ: 18/JAN/2025

ಮಾಲಾಧಾರಿಗಳ ಮೇಲೆ ಸೀಬರ್ಡ್ ನೌಕರರಿಂದ ಹಲ್ಲೆಗೆ ಮೀನುಗಾರರ ಖಂಡನೆ.

✍🏻 ವಿದ್ಯಾಧರ ಮೊರಬಾ

ಅಂಕೋಲಾ‌ : ಹಿಂದೂ ಧರ್ಮದ ಪವಿತ್ರ ಆಚರಣೆಯಾದ ಅಯ್ಯಪ್ಪ ಸ್ವಾಮಿ ಮಾಲಾಧಾರಣೆಯ ಭಕ್ತರ ಮೇಲೆ ಸೀಬರ್ಡ ನೌಕರರ ಹಲ್ಲೆ ನಡೆಸಿದ ಘಟನೆಯನ್ನು ಸಮಸ್ತ‌ ಮೀನುಗಾರ ಸಮುದಾಯ ಖಂಡಿಸುತ್ತದೆ ಎಂದು ಮೀನುಗಾರರ ಫೆಡರೇಶನ್ ನಿರ್ದೇಶಕ‌ರಾಜು ಹರಿಕಂತ್ರ ಹೇಳಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಜನರ ರಕ್ಷಣೆ ಮಾಡಬೇಕಾದ ರಕ್ಷಣಾ ಇಲಾಖೆಯ ಸಿಬ್ಬಂದಿಗಳೇ ಅಮಾಯಕ ಜನರ ಮೇಲೆ ರಾಕ್ಷಸರಂತೆ ಹಲ್ಲೆ ಮಾಡಿರುವದು ಇಡೀ ರಕ್ಷಣಾ ಇಲಾಖೆಗೇ ಅವಮಾನದ ಸಂಗತಿಯಾಗಿದೆ. ಹಲ್ಲೆ ನಡೆಸಿದವರ ಮೇಲೆ ಕಠಿಣ ಕಾನೂ‌ನು ಕ್ರಮ ಜರುಗಿಸಬೇಕು ಮತ್ತು ಮುಂದೆ ಈ ರೀತಿಯ ಘಟನೆ ನಡೆಯದಂತೆ ಕ್ರಮ ಕೈಗೊಂಡು ಜನರಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು. ಭಾವಿಕೇರಿ ಗ್ರಾ.ಪಂ.ಸದಸ್ಯಉದಯ ವಾಮನ ನಾಯಕ ಮಾತನಾಡಿ ದೇಶದ ರಕ್ಷಣೆ ಎಂದರೆ ದೇಶದ ಪ್ರಜೆಗಳ ರಕ್ಷಣೆಯಾಗಿದೆ. ಆದರೆ ರಕ್ಷಕರೇ ಜನರ ಮೇಲೆ ಹಲ್ಲೆ ಮಾಡಿದರೆ ಇದು ಯಾವ ನ್ಯಾಯ. ನೌಕಾನೆಲೆಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಜನರ ಮೇಲೆ ಆಗಾಗ ನೌಕಾನೆಲೆಯ ಸಿಬ್ಬಂದಿಗಳಿಂದ ಈ ರೀತಿಯ ದಬ್ಬಾಳಿಕೆಗಳು ನಡೆಯುತ್ತಿರುವದು ಖಂಡನೀಯ. ಇದು ದೇಶದ ರಕ್ಷಣಾ ಇಲಾಖೆಯ ಮಾನ ತೆಗೆಯುವ ಘಟನೆಯಾಗಿದೆ. ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ ಮೀನುಗಾರರಿಗೂ ಅನಗತ್ಯ ಕಿರುಕುಳ ನೀಡುತ್ತಿರುವದೂ ಅಲ್ಲದೆ ಮಾರುಕಟ್ಟೆಯಲ್ಲೂ ಕಿರಿಕ್ ಮಾಡಿಕೊಂಡ ಅನೇಕ ಉದಾಹರಣೆಗಳಿವೆ. ಇದಕ್ಕೆಲ್ಲ ಇಲಾಖೆಯ ಮೇಲಧಿಕಾರಿಗಳು ಕಡಿವಾಣ ಹಾಕಬೇಕು. ಸೀಬರ್ಡ ಯೋಜನೆಗಾಗಿ ತ್ಯಾಗ ಮಾಡಿದ 4 ಸಾವಿರ ನಿರಾಶ್ರಿತ ಕುಟುಂಬಗಳಿಗೆ ಇದುವರೆಗೂ ಶೇಕಡಾ 10 ರಷ್ಟು ಉದ್ಯೋಗವನ್ನೂ ನೀಡದೆ ಅನ್ಯಾಯ ಮಾಡಲಾಗಿದೆ. ಅಂತದ್ದರಲ್ಲಿ ಈ ರೀತಿಯ ದಬ್ಬಾಳಿಕೆ ಸಹನೀಯವಲ್ಲ ಎಂದರು. ಮೀನುಗಾರ ಮುಖಂಡ
ಶ್ರೀಕಾಂತ ದುರ್ಗೇಕರ ಮಾತನಾಡಿ ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳು ಅತ್ಯಂತ ಕಠಿಣವಾದ ಧಾರ್ಮಿಕ‌ ನಿಷ್ಠೆಯಲ್ಲಿ ಇರುತ್ತಾರೆ. ಅಂತಹ ದೈವಭಕ್ತರ ಮೇಲೆಯೇ ಹಲ್ಲೆ ನಡೆಸಿರುವದು ಅವಮಾನಕರವಾಗಿದೆ. ಮೀನುಗಾರಿಕೆಗೂ ಪದೆ ಪದೇ ಅಡೆತಡೆ ಉಂಟು ಮಾಡುತ್ತಿದ್ದಾರೆ. ರಕ್ಷಣಾ ಇಲಾಖೆಯವರೆಂದರೆ ಏನು ಮಾಡಿದರೂ ನಡೆಯುತ್ತದೆ ಎನ್ನುವ ದುರಹಂಕಾರಿ ಸಿಬ್ಬಂದಿಗಳಿಂದ ಈ ರೀತಿಯ ಕೃತ್ಯಗಳು ನಡೆಯುತ್ತಿದ್ದು ಹಲ್ಲೆಗೊಳಗಾದವರಿಗೆ ನ್ಯಾಯ ಸಿಗಬೇಕು ಅವರ ಮೇಲೆ ದಾಖಲಿಸಿದ ಕೇಸನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಮೀನುಗಾರ ಮುಖಂಡ ಹುವಾ ಖಂಡೇಕರ ಮಾತನಾಡಿ ಈ ಘಟನೆ ಹೊಸದೇನಲ್ಲ ರಕ್ಷಣಾ ಇಲಾಖೆಯ ಸಿಬ್ಬಂದಿಗಳು ಹಿಂದೆಯೂ ಹಲವು ಸಲ ಸಾರ್ವಜನಿಕರ ಮತ್ತು ಮೀನುಗಾರರ ಮೇಲೆ ಹಲ್ಲೆ ನಡೆಸಿದ್ದಾರೆ. ಕೇಂದ್ರದ ರಕ್ಷಣಾ ಇಲಾಖೆಯ ಮಂತ್ರಿಗಳು ಈ ಘಟನೆಯನ್ನು ಹಗುರವಾಗಿ ಪರಿಗಣಿಸದೆ ಸೂಕ್ತ ವಿಚಾರಣೆ ನಡೆಸಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದರು. ಇದೇ ವೇಳೆ ಸಂಜೀವ ಬಲೇಗಾರ ಮತ್ತು ರಾಜೇಶ್ವರಿ ಕೇಣಿಕರ ಮಾತನಾಡಿ ಘಟನೆಯನ್ನು ಖಂಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಧು ಹಾರವಾಡೇಕರ, ಪ್ರವೀಣ ಹರಿಕಂತ್ರ ಮಂಜು ಹರಿಕಂತ್ರ ಇದ್ದರು.