ಡೈಲಿ ವಾರ್ತೆ: 20/JAN/2025

ಕೋಟ ಸಹಕಾರಿ ವ್ಯವಸಾಯಕ ಸಂಘದ ಚುನಾವಣೆ:
ಮತ್ತೊಮ್ಮೆ ಅಧಿಕಾರದ ಗುದ್ದುಗೆ ಏರಿದ ಕಾಂಗ್ರೆಸ್ ಬೆಂಬಲಿತ ಸಹಕಾರಿ ಮಿತ್ರರು

ಕೋಟ: ಇಲ್ಲಿನ ಕೋಟ ಸಹಕಾರಿ ವ್ಯವಸಾಯಕ ಸಂಘದ ಐದು ವರ್ಷ ಅವಧಿಗೆ ನಡೆಯುವ ಚುನಾವಣೆ ಭಾನುವಾರ ಕೋಟ ವಿವೇಕ ವಿದ್ಯಾಸಂಸ್ಥೆಯಲ್ಲಿ ನಡೆಯಿತು.
ಒಟ್ಟು 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಹಾಲಿ ಸಮಿತಿಯ ಸಹಕಾರಿ ಮಿತ್ರರು ಹಾಗೂ ಸಹಕಾರಿ ಭಾರತಿ ಅಭ್ಯರ್ಥಿಗಳ ನಡುವೆ ನೇರ ಪೈಪೋಟಿಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಮೂವರ ಅಭ್ಯರ್ಥಿಗಳು ಜಯ ಗಳಿಸಿದರೆ, ಕಾಂಗ್ರೆಸ್ ಬೆಂಬಲಿತ ಸಹಕಾರಿ ಮಿತ್ರರು 10 ಸ್ಥಾನಗಳಲ್ಲಿ ಜಯಶಾಲಿಯಾದರು.

ಸಹಕಾರಿ ಮಿತ್ರರು ಬಳಗದಿಂದ ಸಾಮಾನ್ಯ ಕ್ಷೇತ್ರದಿಂದ ಉದಯ್ ಕುಮಾರ್ ಶೆಟ್ಟಿ, ಡಾ. ಕೃಷ್ಣ ಕಾಂಚನ್, ಚಂದ್ರ ಪೂಜಾರಿ, ಎಚ್. ನಾಗರಾಜ್ ಹಂದೆ, ರವೀಂದ್ರ ಕಾಮತ್, ಮಹಿಳಾ ಮಿಸಲಾತಿಯಿಂದ ವಸಂತಿ ಅಚ್ಯುತ ಪೂಜಾರಿ, ಹಿಂದುಳಿದ ವರ್ಗ ಎ,ಯಿಂದ ಜಿ.ತಿಮ್ಮ ಪೂಜಾರಿ, ಹಿಂದುಳಿದ ವರ್ಗ ಬಿ.ಯಿಂದ ಮಹೇಶ್ ಶೆಟ್ಟಿ, ಪರಿಶಿಷ್ಟ ಜಾತಿಯಿಂದ ಟಿ.ಮಂಜುನಾಥ್ ಗಿಳಿಯಾರು, ಪರಿಶಿಷ್ಟ ಪಂಗಡದಿಂದ ರಶ್ಮಿತಾ ಜಯಗಳಿಸಿದರೆ,
ಸಹಕಾರ ಭಾರತಿಯಿಂದ ಸಾಮಾನ್ಯ ಕ್ಷೇತ್ರದಿಂದ ಅಜಿತ್ ದೇವಾಡಿಗ, ರಂಜಿತ್ ಕುಮಾರ್, ಮಹಿಳಾ ಮಿಸಲು ಕ್ಷೇತ್ರದಿಂದ ಉಮಾ ಗಾಣಿಗ ಜಯಶಾಲಿಗಳಾಗಿದ್ದಾರೆ.
ಇದರೊಂದಿಗೆ ಸತತವಾಗಿ ಅಧಿಕಾರದ ಗುದ್ದುಗೆ ಏರಿದ ಕಾಂಗ್ರೆಸ್ ಬೆಂಬಲಿತ ಸಹಕಾರಿ ಮಿತ್ರರು ಮತ್ತೊಮ್ಮೆ ಆಡಳಿತದ ಚುಕ್ಕಾಣ ಹಿಡಿದಿದ್ದಾರೆ.

ಭಾನುವಾರ ಬೆಳಿಗ್ಗೆಯಿಂದಲೆ ಕೋಟದ ವಿವೇಕ ವಿದ್ಯಾಸಂಸ್ಥೆಯಲ್ಲಿ ಆವರಣದಲ್ಲಿ ಕಿಕ್ಕಿರಿದು ಸೇರಿದ ಮತದಾರರು ತಮ್ಮ ಬೂತ್‌ಗಳಲ್ಲಿ ಮತದಾನ ಪ್ರಕ್ರಿಯೆ ಭಾಗಿಯಾದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೋಟತಟ್ಟು 21ರ ಬೂತ್‌ನಲ್ಲಿ ಮತದಾನಗೈದರು.
ಇದೇ ಮೊದಲ ಬಾರಿ ಎಂಬಂತೆ ರಾಜಕೀಯ ಕೆಸರಾಟದಂತೆ ಸಹಕಾರಿ ಕ್ಷೇತ್ರದ ಚುನಾವಣೆ ನಡೆದಿದ್ದು, ಕೋಟ ವಿವೇಕ ವಿದ್ಯಾ ಸಂಸ್ಥೆಯ ಹೊರ ಆವರಣ ತುಂಬಿ ತುಳುಕಿದ್ದು ಕಂಡು ಬಂತು,ಕಳೆದ ಚುನಾವಣೆಯಲ್ಲಿ ಎರಡು ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಹೊಂದಾಣಕೆಯ ಮೂಲಕ ಸ್ಥಾನ ಗಿಟ್ಟಿಸಿ ಐದು ವರ್ಷಗಳ ಆಡಳಿತ ನಡೆದದ್ದು ನಮ್ಮ ಕಣ್ಮುಂದಿದೆ.