ಡೈಲಿ ವಾರ್ತೆ: 22/JAN/2025

ಕೋಟ: ಅನಾಥ ಶವದ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಜೀವನ್ ಮಿತ್ರ ಸಂಸ್ಥೆ

ಕೋಟ: ಬ್ರಹ್ಮಾವರ ತಾಲೂಕಿನ ಪಾರಂಪಳ್ಳಿ ಗ್ರಾಮದ ಕೋಡಿ ಸಮುದ್ರ ಕಿನಾರೆಯಲ್ಲಿ ಜ. 17 ರಂದು ಕೊಳೆತ ಸ್ಥಿತಿಯಲ್ಲಿ ದೊರೆತ ಮಹಿಳೆಯ ಶವವನ್ನು ಕೋಟದ‌ ಜೀವನ್ ಮಿತ್ರ ಸಂಸ್ಥೆ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದೆ.

ಕೋಡಿ ಕಡಲ‌ಕಿನಾರೆಯಲ್ಲಿ ಸುಮಾರು 35 ರಿಂದ 40 ವರ್ಷದ ಅಪರಿಚಿತ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ತೇಲುತ್ತಿರುವುದನ್ನು ನೋಡಿ ಸ್ಥಳೀಯರಾದ ಕೃಷ್ಣ ಪೂಜಾರಿ ಕೋಡಿ ಇವರು ಕೊಡಲೇ ಕೋಟ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಿದ್ದರು.
ತಕ್ಷಣ ಪೊಲೀಸ್ ಉಪನಿರೀಕ್ಷಕರಾದ ರಾಘವೇಂದ್ರ ಸಿ. ಹಾಗೂ ಸಿಬಂದಿಗಳು ಸ್ಥಳಕ್ಕೆ ತೆರಲಿ ಪರಿಶೀಲಿಸಿ ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್‌ ಕ್ರಮಾಂಕ: 04/2024 ಕಲಂ:194 BNSS ರಂತೆ ಪ್ರಕರಣ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆ ಹಾಗೂ
ವಾರಸುದಾರರಿಗಾಗಿ ಮಣಿಪಾಲ ಶವಗಾರಕ್ಕೆ ಕಳುಹಿಸಿದ್ದರು.
5 ದಿನ ಕಳೆದರೂ ಈ ಮಹಿಳೆ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವುದರಿಂದ ಜ. 22 ರಂದು ಬುಧವಾರ ಬೆಳಿಗ್ಗೆ ಕೋಟ ಜೀವನ್ ಮಿತ್ರ ನಾಗರಾಜ್ ಪುತ್ರನ್ ಹಾಗೂ ಅವರ ತಂಡ ಮುಂದೆ ಬಂದು ಸಾಲಿಗ್ರಾಮ ಕಾರ್ಕಡ ಹಿಂದೂ ರುದ್ರ ಭೂಮಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳಿಂದ ಅನಾಥ ಶವದ ಅಂತ್ಯ ಸಂಸ್ಕಾರ ನೆರವೇರಿಸಿದ್ದು, ಇವರ‌ ಈ ಮಾನವೀಯ ಕಾರ್ಯಕ್ಕೆ ಎಲ್ಲರಿಂದಲೂ ಶ್ಲಾಘನೆ ವ್ಯಕ್ತವಾಗಿದೆ.
ಈ ವೇಳೆ ಕೋಟ ಪೊಲೀಸ್ ಎಎಸ್ಐ ರವಿ ಕುಮಾರ್, ಸಂಸ್ಥೆಯ ಕಿಶೋರ್ ಶೆಟ್ಟಿ, ಪಟ್ಟಣ ಪಂಚಾಯಿತಿನ ಡಿ. ಗ್ರೂಪ್ ಸದಸ್ಯರು ಭಾಗಿಯಾಗಿದ್ದರು.