ಡೈಲಿ ವಾರ್ತೆ: 23/JAN/2025
ನಿರ್ಮಾಪಕ ರಾಮ್ ಗೋಪಾಲ್ ವರ್ಮಾಗೆ 3 ತಿಂಗಳು ಜೈಲು
ತೆಲುಗು ಚಿತ್ರರಂಗದ ಪ್ರಮುಖ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ಭಾರೀ ಸಂಕಷ್ಟವೊಂದು ಎದುರಾಗಿದೆ. ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳಿಂದಲೇ ಸಂಕಷ್ಟಕ್ಕೆ ಒಳಗಾಗುವ ವರ್ಮಾ ಅವರಿಗೆ ಇದೀಗ ಬರೋಬ್ಬರಿ 3 ತಿಂಗಳು ಜೈಲು ಶಿಕ್ಷೆಗೆ ಗುರಿಯಾಗುವ ಪರಿಸ್ಥಿತಿ ಎದುರಾಗಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಅವರ ಕುಟುಂಬದವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಪೋಸ್ಟ್ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ವರ್ಮಾ ಅವರು ಬಂಧನಕ್ಕೆ ಒಳಗಾಗಬೇಕಾಗಿತ್ತು. ಇದೀಗ ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಸಂಕಷ್ಟ ಎದುರಾಗಿದ್ದು ಜೈಲು ಸೇರುವ ಆತಂಕ ಸೃಷ್ಟಿಯಾಗಿದೆ. ಮೂರು ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಅದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಮುಂಬೈನ ಸ್ಥಳೀಯ ಕೋರ್ಟ್‌ನಿಂದ ಮೂರು ತಿಂಗಳಗಳ ಕಾಲ ವರ್ಮಾಗೆ ಜೈಲು ಶಿಕ್ಷೆ ನೀಡಲಾಗಿದೆ. ನಿರ್ದೇಶಕ ಹಾಗೂ ನಟ ವರ್ಮಾ ಅವರ ಮೇಲೆ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು. ಆದರೆ ವರ್ಮಾ ಅವರು ಈ ಪ್ರಕರಣದ ತೀರ್ಪು ಪ್ರಕಟವಾಗುವ ಸಂದರ್ಭದಲ್ಲಿ ಕೋರ್ಟ್‌ಗೆ ಹಾಜರಾಗಿಲ್ಲ. ಇದನ್ನು ಅಲ್ಲಿನ ಸ್ಥಳೀಯ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ರಾಮ್ ಗೋಪಾಲ್ ವರ್ಮಾ ಅವರ ವಿರುದ್ಧ ಇದೀಗ ಜಾಮೀನು ರಹಿತ ವಾರಂಟ್ ಜಾರಿ ಮಾಡಲಾಗಿದೆ.
ಏಳು ವರ್ಷಗಳ ಪ್ರಕರಣ: ಇನ್ನು ಈ ಪ್ರಕರಣವು ಬರೋಬ್ಬರಿ 7 ವರ್ಷಗಳ ಹಿಂದಿನದ್ದಾಗಿದೆ. ಕಳೆದ ಏಳು ವರ್ಷಗಳಿಂದ ಈ ಪ್ರಕರಣದ ತನಿಖೆ ನಡೆದಿದೆ . 2018ರಲ್ಲಿ ಮುಂಬೈನಲ್ಲಿ ರಾಮ್ ಗೋಪಾಲ್ ವರ್ಮಾ ವಿರುದ್ಧ ಚೆಕ್ ಬೌನ್ಸ್ ಆರೋಪ ಕೇಳಿ ಬಂದಿತ್ತು. ಅಲ್ಲದೆ ಪ್ರಕರಣ ಸಹ ದಾಖಲಾಗಿತ್ತು. ಮಹೇಶ್ಚಂದ್ರ ಮಿಶ್ರಾ ಎನ್ನುವವರಿಗೆ ಕೊಟ್ಟ ಚೆಕ್ ಬೌನ್ಸ್ ಆಗಿದೆ ಎನ್ನುವ ಆರೋಪ ವರ್ಮಾ ಮೇಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಕೋರ್ಟ್‌ಗೆ ಹಾಜರಾಗುವಂತೆ ಸೂಚನೆ ಕೊಟ್ಟಿದ್ದರೂ ಅವರು ಕೋರ್ಟ್‌ಗೆ ಹಾಜರಾಗಿರಲಿಲ್ಲ ಎಂದು ಹೇಳಲಾಗಿದೆ.