ಡೈಲಿ ವಾರ್ತೆ: 03/ಫೆ /2025
ರಾತ್ರಿ 11 ರ ಬಳಿಕ ಕಬಡ್ಡಿ ಪಂದ್ಯಾಟ ನಡೆಸುವಂತಿಲ್ಲ –
ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್
ಬಂಟ್ವಾಳ| ಕಬಡ್ಡಿ ಪಂದ್ಯಾಟಗಳು ರಾತ್ರಿ 11 ರ ಬಳಿಕ ನಡೆಸುವಂತಿಲ್ಲ ಎಂದು ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ನ ವಾರ್ಷಿಕ ಮಹಾಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.
ಬಂಟ್ವಾಳ ರೋಟರಿ ಭವನದಲ್ಲಿ ಭಾನುವಾರದಂದು ನಡೆದ ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ನ ವಾರ್ಷಿಕ ಮಹಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಸಂಸ್ಥೆಯ ಅಧ್ಯಕ್ಷ ರಾಕೇಶ್ ಮಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಕಬಡ್ಡಿಯನ್ನು ಉಳಿಸುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪಂದ್ಯಾಟಗಳು ಸಂಜೆ ವೇಳೆಗೆ ಆರಂಭಗೊಂಡು ರಾತ್ರಿ 11 ರ ವೇಳೆಗೆ ಮುಗಿಸಬೇಕು. ಈ ಬಗ್ಗೆ ಸಹಕರಿಸುವಂತೆ ಪೊಲೀಸ್ ಇಲಾಖೆ, ಜಿಲ್ಲೆಯ ಎಲ್ಲಾ ಶಾಸಕರಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುವುದು ಎಂದು ನಿರ್ಣಯ ಕೈಗೊಳ್ಳಲಾಯಿತು.
ಉಳಿದಂತೆ ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಬಗ್ಗೆ ಇಲ್ಲ ಸಲ್ಲದ ಕಾರಣಗಳನ್ನು ನೀಡಿ ವೃಥಾ ಆರೋಪ ಮಾಡಿರುವುದನ್ನು ಖಂಡಿಸಿ ಖಂಡನಾ ನಿರ್ಣಯ ಕೈಗೊಳ್ಳಲಾಯಿತು. ಸಂಸ್ಥೆಯ ಜಿಲ್ಲಾ ಸದಸ್ಯರಾಗಿದ್ದುಕೊಂಡು ಅಶಿಸ್ತು ತೋರ್ಪಡಿಸಿದ ಇಬ್ಬರು ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಲೆಕ್ಕ ಪರಿಶೋಧಕರಾಗಿ ಬಸರಿ ಎನ್.ರಾವ್ ಅವರನ್ನು ಮುಂದುವರಿಸುವುದು ಎಂಬ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಂಸ್ಥೆಯ ಕಾರ್ಯಾಧ್ಯಕ್ಷ ಚಂದ್ರಹಾಸ ಶೆಟ್ಟಿ ಉಪ್ಪಿನಂಗಡಿ, ಉಪಾಧ್ಯಕ್ಷ ಕೆ.ಟಿ.ಸುವರ್ಣ, ತೀರ್ಪುಗಾರರ ಮಂಡಳಿ ಜಿಲ್ಲಾಧ್ಯಕ್ಷ ಶಿವರಾಮ ಏನೆಕಲ್ಲು, ಬಂಟ್ವಾಳ ತಾಲೂಕು ಅಧ್ಯಕ್ಷ ಪುಷ್ಪರಾಜ್ ಚೌಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಉಪಾಧ್ಯಕ್ಷ ಬೇಬಿ ಕುಂದರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಶೇಖರ ಕರ್ಣ ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ಅನಿಲ್ ಕೆಂಬಾರ್ ಲೆಕ್ಕ ಪತ್ರ ಮಂಡಿಸಿದರು ಮತ್ತು ಸಭೆಯಲ್ಲಿ ಇದನ್ನು ಅಂಗೀಕರಿಸಲಾಯಿತು.
ಅಸೋಸಿಯೇಷನ್ ಗೌರವ ಸಲಹೆಗಾರರಾದ ಪುರುಷೋತ್ತಮ ಪೂಜಾರಿ, ರತನ್ ಶೆಟ್ಟಿ, ಪ್ರಮುಖರಾದ ಕೃಷ್ಣಾನಂದ,
ನಾಮ್ ದೇವ್ ರಾವ್, ಲೋಕನಾಥ್ ಶೆಟ್ಟಿ ಬಿ.ಸಿ.ರೋಡ್, ಮಹಮ್ಮದ್ ವಳವೂರು, ಮೊದಲಾದವರು ಸಲಹೆ ನೀಡಿದರು.
ಬಂಟ್ವಾಳ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಶಿವರಾಜ್ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಕಾರ್ಯಾಧ್ಯಕ್ಷ ಝಕರಿಯಾ ಕಲ್ಲಡ್ಕ, ಕಾರ್ಯದರ್ಶಿ ಲತೀಫ್ ನೇರಳಕಟ್ಟೆ, ತೀರ್ಪುಗಾರರ ಮಂಡಳಿ ಅಧ್ಯಕ್ಷ ಸುರೇಶ್ ಮೈರಡ್ಕ ಮತ್ತು ಪ್ರಸಾದ್ ಶೆಟ್ಟಿ ಸಹಕರಿಸಿದರು.