ಡೈಲಿ ವಾರ್ತೆ: 03/ಫೆ /2025
ಭಟ್ಕಳ| ಬೈಕ್ ಡಿಕ್ಕಿಹೊಡೆದು ಪಾದಚಾರಿ ಸಾವು – ಸವಾರ ಗಂಭೀರ
ಭಟ್ಕಳ: ಬೈಕ್ ಡಿಕ್ಕಿ ಹೊಡೆದು ಪಾದಚಾರಿ ಸಾವನ್ನಪ್ಪಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಭಟ್ಕಳದ ರಾಷ್ಟ್ರೀಯ ಹೆದ್ದಾರಿ 66ರ ತೂರು ಮಸೀದಿ ಬಳಿ ಸೋಮವಾರ ಬೆಳಗ್ಗೆ ಸಂಭವಿಸಿದೆ.
ಮೃತರನ್ನು ನಿಶಾತ್ ನರ್ಸಿಂಗ್ ಹೋಮ್ ಹಿಂಭಾಗದ ಫ್ಲ್ಯಾಟ್‌ನ ನಿವಾಸಿ ಮೊಹಮ್ಮದ್ ಇಬ್ರಾಹಿಂ (64) ಎಂದು ಗುರುತಿಸಲಾಗಿದೆ. ಮೂಲತಃ ಬೆಂಗಳೂರಿನವರಾದ ಇವರು ಕಳೆದ 25 ವರ್ಷಗಳಿಂದ ಭಟ್ಕಳದಲ್ಲಿ ನೆಲೆಸಿದ್ದು, ತೂರು ಮಸೀದಿಯಲ್ಲಿ ಬಹುಕಾಲದಿಂದ ಮುಅಝಿನ್ ಆಗಿ ಸೇವೆ ಸಲ್ಲಿಸಿದ್ದರು.
ಸ್ಥಳೀಯ ಮೂಲಗಳ ಪ್ರಕಾರ, ಮೊಹಮ್ಮದ್ ಇಬ್ರಾಹಿಂ ಮನೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಭಟ್ಕಳ ತಾಲೂಕಿನ ನೂಜ್ ನಿವಾಸಿಯೊಬ್ಬರು ವೇಗವಾಗಿ ಹಾಗೂ ನಿರ್ಲಕ್ಷದಿಂದ ಚಲಾಯಿಸಿಕೊಂಡು ಬಂದ ಬೈಕ್ ಡಿಕ್ಕಿ ಹೊಡೆದಿದ್ದಾರೆ ಎಂದು ವರದಿಯಾಗಿದೆ.
ಡಿಕ್ಕಿಯ ರಭಸಕ್ಕೆ ತಲೆ ಮತ್ತು ಕೈಗೆ ತೀವ್ರ ಗಾಯಗಳಾಗಿದ್ದು, ಕೂಡಲೇ ಅವರನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಗಂಭೀರ ಸ್ವರೂಪದ ಗಾಯಗಳಾಗಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಲಾಗಿದೆ.
ಆದರೆ ಮಾರ್ಗಮಧ್ಯೆ ಮೊಹಮ್ಮದ್ ಇಬ್ರಾಹಿಂ ಅವರು ಮೃತಪಟ್ಟಿರುತ್ತಾರೆ.
ಅಪಘಾತದಲ್ಲಿ ಬೈಕ್ ಸವಾರರಿಗೂ ಗಂಭೀರ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆಗೆ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ರವಾನಿಸಲಾಗಿದೆ.
ಮೊಹಮ್ಮದ್ ಇಬ್ರಾಹಿಂ ಅವರ ಧರ್ಮನಿಷ್ಠೆ ಮತ್ತು ಭಕ್ತಿಗೆ ಹೆಸರುವಾಸಿಯಾಗಿದ್ದರು ಮತ್ತು ನಿಯಮಿತವಾಗಿ ಐದು ಬಾರಿ ಪ್ರಾರ್ಥನೆಗೆ ಹಾಜರಾಗುತ್ತಿದ್ದರು. ಅವರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಘಟನೆ ಸಂಬಂಧ ಭಟ್ಕಳ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.