ಡೈಲಿ ವಾರ್ತೆ: 07/ಫೆ. /2025

ಕೇರಳ ಮೂಲದ ಕುಖ್ಯಾತ ಕಳ್ಳ ಬೆಂಗಳೂರಲ್ಲಿ ನಿಗೂಢ ಸಾವು: ಸುಳಿವು ನೀಡಿತು ಟ್ಯಾಟೂ

ಬೆಂಗಳೂರು: ಕೇರಳ ಮೂಲದ ಕುಖ್ಯಾತ ಕಳ್ಳ ಬೆಂಗಳೂರಲ್ಲಿ ಮೃತಪಟ್ಟು ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು.
ಅವನ ಮೇಲೆ 30ಕ್ಕೂ ಹೆಚ್ಚು ಕೇಸ್​ಗಳಿವೆ. ಅದೇ ಕೇಸ್ ಬೆಂಗಳೂರು ಪೊಲೀಸರಿಗೆ ತಲೆ‌ ಕೆಡಿಸಿದೆ. ಇದು ಕೊಲೆಯೋ ಇಲ್ಲಾ ಆತ್ಮಹತ್ಯೆಯೋ ಅನ್ನೋದೇ ನಿಗೂಢವಾಗಿದೆ.

ಅದು 2024 ರ ಜನವರಿ 24 ಕನಕಪುರ ರಸ್ತೆ ಕೋಣನಕುಂಟೆ ಕ್ರಾಸ್​ನಲ್ಲಿರುವ ಪ್ರತಿಷ್ಠಿತ ಫ್ಯಾಷನ್ ಫ್ಯಾಕ್ಟರಿ ಬೇಸ್ ಮೆಂಟ್​ನಲ್ಲಿ ಕೊಳೆತ ಸ್ಥಿತಿಯಲ್ಲಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿತ್ತು. ತಕ್ಷಣ ಅಲರ್ಟ್ ಆದ ಕೋಣನಕುಂಟೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದರು. ಈ ವೇಳೆ ಹೀಗೆ ಸತ್ತವನು ಯಾರು ಅನ್ನೋದು ಗೊತ್ತಾಗಿದೆ. ಅವನೇ ವಿಷ್ಣು ಪ್ರಶಾಂತ್. ಮೂಲತಃ ಕೇರಳದವನಾಗಿದ್ದ ಈತ ಕುಖ್ಯಾತ ಕಳ್ಳನಾಗಿದ್ದ. ಈತನ ಮೇಲೆ ಕೇರಳ, ತಮಿಳುನಾಡು, ಕರ್ನಾಟಕ ಸೇರಿದಂತೆ ಹಲವೆಡೆ 30 ಕ್ಕೂ ಹೆಚ್ಚು ಕೇಸ್ ಗಳಿವೆ ಅನ್ನೋದು ಗೊತ್ತಾಗಿದೆ.

ಇತ್ತೀಚೆಗೆ ಜೈಲಿನಿಂದ ಹೊರಬಂದಿದ್ದ ವಿಷ್ಣು ಪ್ರಶಾಂತ್ ಡಿಸಂಬರ್ 15 ರ ವರೆಗೆ ದಕ್ಷಿಣ ವಿಭಾಗದಲ್ಲಿ ಓಡಾಡಿರೋದು ಗೊತ್ತಾಗಿದೆ. ಅದಾದ ಬಳಿಕ ನಿಗೂಢವಾಗಿ ಸಾವನ್ನಪ್ಪಿದ್ದು, ಇದು ಕೊಲೆಯೋ ಇಲ್ಲಾ ಆಕಸ್ಮಿಕವಾಗಿ ಸಂಭವಿಸಿದ ಸಾವೋ ಅನ್ನೋದು ಇನ್ನೂ ನಿಗೂಢವಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಪೊಲೀಸರು ಕಾಯುತ್ತಿದ್ದಾರೆ.

ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಕೋಣನಕುಂಟೆ ಪೊಲೀಸರಿಗೆ ಆರೋಪಿ ಬಳಿ ಮೊಬೈಲ್ ಪತ್ತೆಯಾಗಿತ್ತು. ಮೊಬೈಲ್‌ ಮಾಲೀಕನ ಹುಡುಕಾಟ‌ ನಡೆಸಿದ್ದ ಪೊಲೀಸರು ಶಾಕ್ ಆಗಿದ್ದರು. ಯಾಕಂದ್ರೆ ಮೊಬೈಲ್‌ ಮಾಲೀಕ ಕೇರಳದಲ್ಲಿ ಪತ್ತೆಯಾಗಿದ್ದ. ಆತನ ವಿಚಾರಿಸಿದಾಗ ಮೊಬೈಲ್ ಕಳ್ಳತನವಾಗಿರೋದು ಗೊತ್ತಾಗಿದೆ. ತಕ್ಷಣ ಕೋಣನಕುಂಟೆ ಪೊಲೀಸರು ಕೇರಳ ಪೊಲೀಸರಿಗೆ ಮೃತನ ಫೋಟೋ ಕಳಿಸಿದ್ದರು. ಕೈಮೇಲಿದ್ದ ಟ್ಯಾಟೂ ವಿಷ್ಣು ಪ್ರಶಾಂತ್ ಅನ್ನೋದನ್ನ ಖಾತ್ರಿ ಪಡಿಸಿತ್ತು. ಆತನ ಹಿಸ್ಟರಿ‌ ಕೆದಕಿದಾಗ ಆತನ‌ ಮೇಲೆ‌ 30ಕ್ಕೂ ಹೆಚ್ಚು ಕಳ್ಳತನ ಕೇಸ್ ಇರೋದು ಪತ್ತೆಯಾಗಿದೆ.

ಸಾವಿನ ಬಳಿಕವೂ ಮನೆಯವರಿಗೆ ಬೇಡವಾದ ಕಳ್ಳ
ಕಳ್ಳನಾಗಿದ್ದ ವಿಷ್ಣು ಪ್ರಶಾಂತ್ ಸಾವಿನ ಬಳಿಕವೂ ಮನೆಯವರಿಗೆ ಬೇಡವಾಗಿದ್ದ. ಮೃತದೇಹ ಗುರುತು ಪತ್ತೆಗಾಗಿ ಪೊಲೀಸರು ಕುಟುಂಬಸ್ಥರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಕುಟುಂಬಸ್ಥರು ಬೆಂಗಳೂರಿಗೆ ಬರೋದಕ್ಕೆ ನಿರಾಕರಿಸಿದ್ದಾರೆ. ಬಲವಂತವಾಗೆ ಕರಿಸಿಕೊಂಡ ಪೊಲೀಸರಿಗೆ ಶಾಕ್ ಕಾದಿತ್ತು. ಗುರುತು ಪತ್ತೆ ಮಾಡಿ ಹೊರಟು ಹೋಗಿದ್ದರು. ಇತ್ತ ಕೋಣನಕುಂಟೆ ಪೊಲೀಸರೇ ಅಂತ್ಯಕ್ರಿಯೆ ಮಾಡಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆ ವರದಿಗಾಗಿ ಪೊಲೀಸರು ಕಾಯುತ್ತಿದ್ದು, ವರದಿ ಬಳಿಕ ಇದು ಕೊಲೆಯೋ‌ ಅಥವಾ ಆಕಸ್ಮಿಕ ಸಾವೋ ಅನ್ನೋದು ಗೊತ್ತಾಗಲಿದೆ.