

ಡೈಲಿ ವಾರ್ತೆ: 14/ಫೆ. /2025


ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ

ಮಡಿಕೇರಿ: ನಗರದ ಗಾಳಿ ಬೀಡಿನಲ್ಲಿರುವ ನವೋದಯ ಶಾಲೆಯಿಂದ ನಾಪತ್ತೆಯಾಗಿದ್ದ ಎಂ. ಅಮಿತ್ (17) ಎಂಬ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ.
ನವೋದಯ ಶಾಲೆಯ ಸಿಬ್ಬಂದಿ ಆನಂದ್ ಎಂಬವರ ಪುತ್ರನಾಗಿರುವ ಎಂ.ಅಮಿತ್ ಫೆ.11ರಂದು ಬೆಳಗೆ 7 ಗಂಟೆಗೆ ಶಾಲಾ ಆವರಣದಲ್ಲಿರುವ ಸಿಬ್ಬಂದಿಗಳ ವಸತಿ ಗೃಹದಿಂದ ಶಾಲೆಗೆಂದು ತೆರಳಿದ್ದಾನೆ. 11 ಗಂಟೆಯ ವೇಳೆಗೆ ಅಮಿತ್ ಶಾಲೆಯ ಮುಖ್ಯ ದ್ವಾರದ ಮೂಲಕ ರಸ್ತೆ ಕಡೆಗೆ ಬಂದಿದ್ದಾನೆ.
ಇದನ್ನು ಕಂಡ ಅಲ್ಲಿನ ಸೆಕ್ಯುರಿಟಿ ಸಿಬ್ಬಂದಿ, ಅಮಿತ್ ತಂದೆ ಆನಂದ್ ಅವರಿಗೆ ತಿಳಿಸಿದ್ದಾರೆ. ತಕ್ಷಣವೇ ಆನಂದ್ ರಸ್ತೆ ಕಡೆಗೆ ಬಂದಿದ್ದು, ಆದ್ರೆ ಅಮಿತ್ ಮಾತ್ರ ಕಂಡು ಬರಲಿಲ್ಲ. ಈ ಕುರಿತು ಆನಂದ್ ಮಡಿಕೇರಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.
ಕೂಟುಪೊಳೆಯಲ್ಲಿ ಶೋಧ:
ಅಮಿತ್ ಚಪ್ಪಲಿ ಕೂಟುಪೊಳೆ ದಡದಲ್ಲಿ ಪತ್ತೆಯಾದ ಹಿನ್ನಲೆಯಲ್ಲಿ, ಅಗ್ನಿ ಶಾಮಕ ದಳದ ಸಿಬ್ಬಂದಿಗಳು ನಿನ್ನೆಯಿಂದ ಕೂಟುಪೊಳೆಯಲ್ಲಿ ಅಮಿತ್‌ಗಾಗಿ ಶೋಧ ನಡೆಸಿದರು.
ಪೊಲೀಸರ ಕೋರಿಕೆಯ ಮೇರೆಗೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ರ‍್ಯಾಫ್ಟ್ ಬೋಟ್ ಮೂಲಕ ಕೂಟುಹೊಳೆ ಮುಂಭಾಗದಿಂದ ಹಿನ್ನೀರಿನವರೆಗೂ ತೆರಳಿ ಶೋಧಿಸಿದರು. ಇದೀಗ ಮೃತ ದೇಹ ಕೂಟು ಪೊಳೆಯಲ್ಲಿ ಪತ್ತೆಯಾಗಿದೆ.