

ಡೈಲಿ ವಾರ್ತೆ: 14/ಫೆ. /2025


ಬೆಳ್ತಂಗಡಿ ಮೂಲದ ವ್ಯಕ್ತಿ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಮೃತ್ಯು

ಬೆಳ್ತಂಗಡಿ: ನೂರಾರು ಕನಸುಗಳೊಂದಿಗೆ ಶುಕ್ರವಾರ ಊರಿಗೆ ಹೊರಟಿದ್ದ ಬೆಳ್ತಂಗಡಿಯ ಸಂಜಯನಗರ ನಿವಾಸಿ ಹಿದಾಯತ್ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಗುರುವಾರ ತಡ ರಾತ್ರಿ ನಡೆದಿದೆ.
ಹಿದಾಯತ್ ತನ್ನ ಸ್ನೇಹಿತ ರಫೀಕ್ ಎಂಬವರಿಗೆ ಕರೆ ಮಾಡಿ ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತನ್ನ ಕಾರನ್ನು ತರಲು ಹೇಳಿ ಜಿದ್ದಾದಿಂದ ರಾತ್ರಿ 10:30 ರ ವಿಮಾನದಲ್ಲಿ ಹೊರಟು ಬೆಳಗಿನ ಜಾವ ಮಂಗಳೂರು ತಲುಪುವವರಿದ್ದರು.
ಜಿದ್ದಾ ವಿಮಾನ ನಿಲ್ದಾಣಕ್ಕೆ ಕಾರಲ್ಲಿ ಬಂದು ತಲುಪಿದ್ದಂತೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ತಕ್ಷಣ ಅವರನ್ನು ಅಲ್ಲಿನ ವಿಮಾನ ನಿಲ್ದಾಣದ ಪಕ್ಕದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅದಾಗಲೇ ಅವರು ಮೃತಪಟ್ಟಿದ್ದರು.
ಅವರ ಪಾರ್ಥಿವ ಶರೀರವನ್ನು ಊರಿಗೆ ತರುವ ಬಗ್ಗೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಒಂದು ದಿನದಲ್ಲಿ ವಿವರ ತಿಳಿಯಲಿದೆ ಎಂದು ಅವರ ಸ್ನೇಹಿತ ಎಸ್ ಡಿಪಿಐ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ ತಿಳಿಸಿದ್ದಾರೆ.
ಮೃತರು ತಂದೆ ಅಬ್ದುಲ್ ರಝಾಕ್, ತಾಯಿ ಶಂಶೀರ ಬಾನು, ಪತ್ನಿ ಹಾಗೂ ಒಂದು ಗಂಡು,ಮೂರು ಹೆಣ್ಣು ಮಕ್ಕಳು ಹಾಗೂ ಬಂಧುಗಳನ್ನು ಅಗಲಿದ್ದಾರೆ.