ಡೈಲಿ ವಾರ್ತೆ: 15/ಫೆ. /2025

ಮಾ.1 ರಿಂದ ಮಾ.07 ರ ವರೆಗೆ ಪೊಳಲಿ ಶ್ರೀ ದುರ್ಗಾ ಪರಮೇಶ್ವರಿ ರಾಜರಾಜೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಶತ ಚಂಡಿಕಾಯಾಗ ಹಾಗೂ ರಂಗಪೂಜೆ ಉತ್ಸವ

ಬಂಟ್ವಾಳ : ಪೊಳಲಿ ಶ್ರೀ ದುರ್ಗಾ ಪರಮೇಶ್ವರಿ ರಾಜ ರಾಜೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥ ಹಾಗೂ ಸಾನಿಧ್ಯ ವೃದ್ದಿಗಾಗಿ ಮಾ.1 ರಿಂದ ಮಾ.07 ರ ವರೆಗೆ ಬ್ರಹ್ಮ ಶ್ರೀ ವೇದಮೂರ್ತಿ ಪೊಳಲಿ ಶ್ರೀ ಕೃಷ್ಣ ತಂತ್ರಿಗಳ ಮಾರ್ಗರ್ಶನದಲ್ಲಿ ಶತ ಚಂಡಿಕಾಯಾಗ ಹಾಗೂ ಸೇವಾ ರೂಪದಲ್ಲಿ ದೊಡ್ಡ ರಂಗಪೂಜೆ ಉತ್ಸವ ಜರಗಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಿಳಿಸಿದರು.

ಪೊಳಲಿ ಸರ್ವಮಂಗಲ ಕಲ್ಯಾಣ ಮಂಟಪದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರೀ ರಾಜ ರಾಜೇಶ್ವರೀ ದೇವಸ್ಥಾನ ಪೊಳಲಿ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ಪ್ರವರ್ಗ ‘ಎ’ ಗೆ ಸೇರಿದ ದೇವಸ್ಥಾನ ವಾಗಿರುತ್ತದೆ. ದೇವಳದಲ್ಲಿ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದಂತ ಪರಿಹಾರವಾಗಿ ಮಾ. 05 ರಂದು ಸಾವಿರ ಸೀಮೆಯವರು ಸೇರಿ ಶತಚಂಡಿಕಾಯಾಗ ಹಾಗೂ ಮಾ. 06 ರಂದು ಸೇವಾ ರೂಪದಲ್ಲಿ ದೊಡ್ಡ ರಂಗಪೂಜೆ ನಡೆಯಲಿದೆ. ಮಾ. 01 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ಆರು ವರ್ಷಗಳ ಹಿಂದೆ ಇಲ್ಲಿ ದೇವರ ಆಶ್ರೀರ್ವಾದದಿಂದ ಬಹಳ ಯಶಸ್ವಿಯಾಗಿ ನಡೆದಿತ್ತು. ಅದೇ ರೀತಿಯಲ್ಲಿ ಶತ ಚಂಡಿಕಾಯಾಗ ಹಾಗೂ ದೊಡ್ಡ ರಂಗ ಪೂಜೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಸಲು ಯೋಜನೆ ತಯಾರಿಸಲಾಗಿದೆ. ಸಕಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದ್ದು, ಸರ್ವರ ಸಹಕಾರವನ್ನು ಯಾಚಿಸುವುದಾಗಿ ತಿಳಿಸಿದರು. ಈಗಾಗಲೇ ಪ್ರತಿ ಮನೆಮನೆಗೆ ಆಮಂತ್ರಣ ಪತ್ರ ನೀಡುವ ವ್ಯವಸ್ಥೆ ಮಾಡಲಾಗಿದೆ. ಶತ ಚಂಡಿಕಾಯಾಗ ಹಾಗೂ ದೊಡ್ಡರಂಗಪೂಜೆಗೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ 15 ಎಕ್ರೆ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲು ತೀರ್ಮಾನಿಸಲಾಗಿದೆ. ಶತ ಚಂಡಿಕಾಯಾಗ ಹಾಗೂ ದೊಡ್ಡರಂಗಪೂಜೆಗೆ ಸುಮಾರು 25 ಸಾವಿರ ಜನ ಭಕ್ತಾದಿಗಳು ಬರುವ ನಿರೀಕ್ಷೆ ಇದ್ದು, ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಚೆಂಡಿನ ಗದ್ದೆಯಲ್ಲಿ ಮಾಡಲಾಗುವುದು. ಹಾಗೂ ಶತಚಂಡಿಕಾಯಾಗಕ್ಕೆ ಬರುವ ಭಕ್ತಾದಿಗಳಿಗೆ ಬೆಳಿಗ್ಗಿನ ಉಪಹಾರದ ವ್ಯವಸ್ಥೆಯನ್ನು ಮಾಡಲಾಗುವುದು. ದೇವಳಕ್ಕೆ ಬರುವ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಸರದಿ ಸಾಲಿನಲ್ಲಿ ಹೋಗಲು ವ್ಯವಸ್ಥಿತವಾಗಿ ವ್ಯವಸ್ಥೆ ಮಾಡಲಾಗುವುದು. ಈ ಕಾರ್ಯಕ್ರಮ ಯಶ್ವಸಿಯಾಗಿ ನೆರೆವೇರಲು ಸಂಘ ಸಂಸ್ಥೆಗಳ ಸ್ವಯಂ ಸೇವಕರು ತಮ್ಮ ತಂಡದ ಹೆಸರನ್ನು ನೋಂದಾಯಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮೊಕ್ತೇಸರ ಡಾ|ಮಂಜಯ್ಯ ಶೆಟ್ಟಿ, ಅರ್ಚಕರಾದ ಪದ್ಮನಾಭ ಭಟ್, ಅನಂತ ಪದ್ಮನಾಭ ಭಟ್ ಉಪಸ್ಥಿತರಿದ್ದರು.