

ಡೈಲಿ ವಾರ್ತೆ: 16/ಫೆ. /2025


ದೆಹಲಿ ರೈಲು ನಿಲ್ದಾಣದಲ್ಲಿ ಭೀಕರ ಕಾಲ್ತುಳಿತ: ಮಹಾ ಕುಂಭಮೇಳಕ್ಕೆ ಹೊರಟಿದ್ದ 18 ಮಂದಿ ಸಾವು

ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಹೊರಟ ಭಕ್ತಸಮೂಹದಲ್ಲಿ ಮತ್ತೊಂದು ಕಾಲ್ತುಳಿತ ದುರಂತ ಸಂಭವಿಸಿದೆ. ನವದೆಹಲಿಯ ರೈಲು ನಿಲ್ದಾಣದಲ್ಲಿ ಶನಿವಾರ ತಡರಾತ್ರಿ ಉಂಟಾದ ಕಾಲ್ತುಳಿತದಲ್ಲಿ 18 ಮಂದಿ ಸಾವನ್ನಪ್ಪಿ, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವನ್ನಪ್ಪಿದವರ ಪೈಕಿ ಬಹುತೇಕ, 14 ಮಂದಿ ಮಹಿಳೆಯರು,ಇಬ್ಬರು ಮಕ್ಕಳು, ಇಬ್ಬರು ಪುರುಷರು ಎಂದು ವರದಿಯಾಗಿದೆ.
ದೆಹಲಿಯ ಕೇಂದ್ರ ರೈಲು ನಿಲ್ದಾಣದ 14, 15ನೇ ಪ್ಲಾರ್ಟ್ಫಾರ್ಮ್ನಲ್ಲಿ ಘಟನೆ ನಡೆದಿದೆ. ಸಾವಿರಾರು ಜನರು ಎರಡೂ ಪ್ಲಾರ್ಟ್ಫಾರ್ಮ್ಗಳಲ್ಲಿ ಕಿಕ್ಕಿರಿದು ತುಂಬಿದ್ದರು. ರೈಲು ಹತ್ತಲು ಪ್ರಯತ್ನಿಸುತ್ತಿರುವ ವೇಳೆ ಕಾಲ್ತುಳಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2 ರೈಲುಗಳು ತಡವಾಗಿದ್ದೇ ಕಾರಣವೇ?: ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ರಾತ್ರಿ 9.55ರ ಸುಮಾರಿನಲ್ಲಿ ಪ್ರಯಾಗ್ರಾಜ್ಗೆ ಹೊರಡಬೇಕಿದ್ದ ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ಮತ್ತು ಭುವನೇಶ್ವರ ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳ ಪ್ರಯಾಣ ನಿಗದಿತ ಸಮಯಕ್ಕಿಂತ ವಿಳಂಬ ಮಾಡಿದ್ದವು. ಇದರಿಂದ, ನಿಲ್ದಾಣವು ಸಾವಿರಾರು ಭಕ್ತರಿಂದ ತುಂಬಿ ತುಳುಕುತ್ತಿತ್ತು.
12, 13, 14ನೇ ಪ್ಲಾರ್ಟ್ಫಾರ್ಮ್ ಮೇಲೆ ನಿಯಂತ್ರಿಸಲಾಗದಷ್ಟು ಪ್ರಮಾಣದಲ್ಲಿ ಜನರು ತುಂಬಿದ್ದರು. ಇನ್ನಷ್ಟು ಭಕ್ತರು ನಿಲ್ದಾಣದೊಳಗೆ ಬರುತ್ತಿರುವಾಗ ಎಸ್ಕಲೇಟರ್ ಬಳಿ ಕಾಲ್ತುಳಿತ ಸಂಭವಿಸಿದೆ. ಈ ವೇಳೆ ಒಬ್ಬರ ಮೇಲೆ ಒಬ್ಬರು ಬಿದ್ದ ಕಾರಣ ಸಾವು ಸಂಭವಿಸಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.