

ಡೈಲಿ ವಾರ್ತೆ: 16/ಫೆ. /2025


ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ – 6 ಹಸುಗಳು, 2 ಕರುಗಳು ಸಜೀವ ದಹನ

ಹಾವೇರಿ: ಆಕಸ್ಮಿಕವಾಗಿ ದನದ ಕೊಟ್ಟಿಗೆಗೆ ಬೆಂಕಿಬಿದ್ದು 6 ಹಸುಗಳು ಹಾಗೂ 2 ಕರುಗಳು ಸಜೀವ ದಹನವಾಗಿರುವ ಘಟನೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಕರೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ನಾಗಪ್ಪ ಅಸುಂಡಿ, ಹನುಮಂತಪ್ಪ ಅಸುಂಡಿ ಎಂಬುವರಿಗೆ ಸೇರಿದ ದನದ ಕೊಟ್ಟಿಗೆಯಲ್ಲಿ ಈ ದುರ್ಘಟನೆ ನಡೆದಿದೆ.
ಊರಿನ ಹೊರಗಿರುವ ದನದ ಕೊಟ್ಟಿಗೆಯಲ್ಲಿ ಹಸುಗಳನ್ನು ಕಟ್ಟಲಾಗಿತ್ತು. ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿಬಿದ್ದು 6 ಹಸು, 2 ಕರುಗಳು ಸ್ಥಳದಲ್ಲಿಯೇ ಸಜೀವ ದಹನಗೊಂಡಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಸುಮಾರು 6 ಲಕ್ಷ ರೂ.ಗೂ ಅಧಿಕ ಮೌಲ್ಯದ ದನದ ಕೊಟ್ಟಿಗೆ ಮತ್ತು ಹಸುಗಳು ಸುಟ್ಟು ಕರಗಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.