

ಡೈಲಿ ವಾರ್ತೆ: 18/ಫೆ. /2025


ಕೋಟ|ಸ್ಕೂಟರ್ ಹಾಗೂ ಗೂಡ್ಸ್ ರಿಕ್ಷಾ ಮುಖಮುಖಿ ಡಿಕ್ಕಿ – ಸವಾರ ಸಾವು, ಸಹಸವಾರ ಗಂಭೀರ ಗಾಯ

ಕೋಟ: ಸ್ಕೂಟರ್ ಹಾಗೂ ಗೂಡ್ಸ್ ರಿಕ್ಷಾ ಮುಖಮುಖಿ ಡಿಕ್ಕಿ ಹೊಡೆದು ಸವಾರ ಮೃತಪಟ್ಟು ಸಹಸವಾರ ಗಂಭೀರ ಗಾಯಗೊಂಡ ಘಟನೆ ಫೆ. 18 ರಂದು ಮಂಗಳವಾರ ರಾಷ್ಟ್ರೀಯ ಹೆದ್ದಾರಿ 66ರ ಚೇಂಪಿಯ ವಿಶ್ವಕರ್ಮ ಸಭಾ ಭವನ ಬಳಿ ಸಂಭವಿಸಿದೆ.
ಮೃತಪಟ್ಟ ಸ್ಕೂಟರ್ ಸವಾರ ಗುಂಡ್ಮಿ ಅನಂತ ಹೆಗ್ಡೆ(40) ಎಂದು ಗುರುತಿಸಲಾಗಿದೆ.
ಗಂಭೀರ ಗಾಯಗೊಂಡ ಸಹಸವಾರ ಚೇಂಪಿ ದೇವಸ್ಥಾನದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವಿಶ್ವನಾಥ್ ನಾಯಕ್ ಅವರನ್ನು ಬ್ರಹ್ಮಾವರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ:
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಡುಪಿಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಗೂಡ್ಸ್ ರಿಕ್ಷಾಕ್ಕೆ ಅದೇ ದಾರಿಯಲ್ಲಿ ವಿರುದ್ದ ದಿಕ್ಕಿನಿಂದ ಸಾಲಿಗ್ರಾಮದಿಂದ ಗುಂಡ್ಮಿ ಕಡೆಗೆ ಹೋಗುತ್ತಿದ್ದ ಸ್ಕೂಟರ್ ನೇರ ಮುಖಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ಅನಂತ ಹೆಗ್ಡೆ ರಸ್ತೆಗೆ ಬಿದ್ದಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ.
ತಕ್ಷಣ ಸ್ಥಳೀಯರ ಸಹಕಾರದಿಂದ ಟೋಲ್ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ಕೋಟ ಠಾಣಾ ಪೊಲೀಸರು ತಕ್ಷಣ ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.