


ಡೈಲಿ ವಾರ್ತೆ: 19/ಫೆ. /2025


ರೀಲ್ಸ್ ಗಾಗಿ ತುಂಗಭದ್ರಾ ನದಿಗೆ 20 ಅಡಿ ಬಂಡೆಯ ಮೇಲಿಂದ ಜಿಗಿದ ವೈದ್ಯೆ – ನೀರುಪಾಲು!

ಗಂಗಾವತಿ: ಸ್ನೇಹಿತರೊಂದಿಗೆ ರಜೆ ಕಳೆಯಲು ಆಗಮಿಸಿದ್ದ ತೆಲಂಗಾಣದ ಖಾಸಗಿ ಆಸ್ಪತ್ರೆಯ ವೈದ್ಯೆವೊಬ್ಬರು
ರೀಲ್ಸ್ ಗಾಗಿ ತುಂಗಭದ್ರಾ ನದಿಗೆ 20 ಅಡಿ ಬಂಡೆಯ ಮೇಲಿಂದ ಜಿಗಿದು ನದಿಯಲ್ಲಿ ಕೊಚ್ಚಿಹೋಗಿರುವ ಘಟನೆ ತಾಲೂಕಿನ ಸಣಾಪುರದ ಬಳಿ ಸಂಭವಿಸಿದೆ.
ನೀರಿನಲ್ಲಿ ನಾಪತ್ತೆಯಾಗಿರುವ ವೈದ್ಯೆಯನ್ನು ಹೈದರಾಬಾದ್ನ ನಾಂಪಲ್ಲಿ ಪ್ರದೇಶದ ನಿವಾಸಿ ಅನನ್ಯ ಮೋಹನ್ ರಾವ್ (26) ಎಂದು ಗುರುತಿಸಲಾಗಿದೆ.
ಇವರು ಹೈದರಾಬಾದ್ನ ವಿಕೆಸಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದರು. ರಜೆ ಕಳೆಯಲು ತಮ್ಮ ಸ್ನೇಹಿತರಾದ ಅಶಿತಾ ಮತ್ತು ಸಾತ್ವಿಕ್ ಜೊತೆ ಅನನ್ಯ ಅವರು ಸಣಾಪುರ ಸಮೀಪ ಇರುವ ಖಾಸಗಿ ಗೆಸ್ಟ್ಹೌಸ್ಗೆ ಮಂಗಳವಾರ ಸಂಜೆ ಬಂದಿಳಿದಿರುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
ಈ ಗೆಸ್ಟ್ ಹೌಸ್ ಹಿಂದೆ ಇರುವ ತುಂಗಭದ್ರಾ ನದಿಯಲ್ಲಿ ಈ ಮೂವರು ಈಜಲು ಹೋಗಿದ್ದರು. ಈ ಪೈಕಿ ಅನನ್ಯ, ನದಿಯಲ್ಲಿ ಈಜಲು ಸಮೀಪದ ಬಂಡೆಯೊಂದರ ಮೇಲಿಂದ ನೀರಿಗೆ ಜಿಗಿದಿದ್ದಾರೆ. ನದಿಯಲ್ಲಿನ ನೀರಿನ ಸೆಳೆತದಿಂದ ಕೊಚ್ಚಿ ಹೋಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪೊಲೀಸ್ ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ನೀರಿನಲ್ಲಿ ನಾಪತ್ತೆಯಾಗಿರುವ ಅನನ್ಯ ಅವರ ಶೋಧಕ್ಕೆ ಮುಂದಾಗಿದ್ದಾರೆ. ಕಲ್ಲು ಬಂಡೆಯ ಮೇಲಿಂದ ವೈದ್ಯೆ ಜಿಗಿಯುವ ಕೊನೆಯ ಕ್ಷಣದ ದೃಶ್ಯಾವಳಿ ಅವರ ಸ್ನೇಹಿತನ ಮೊಬೈಲ್ನಲ್ಲಿ ಸೆರೆಯಾಗಿದೆ. ಈ ಬಗ್ಗೆ ಗ್ರಾಮೀಣ ಪೊಲೀಸರು ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದಾರೆ.