ಡೈಲಿ ವಾರ್ತೆ: 20/ಫೆ. /2025

ಜಮೀನಿಗೆ ಬಂದ ಜೀವಂತ ಮೊಸಳೆ ಸೆರೆ| ಜೆಸ್ಕಾಂ ಕಚೇರಿ ಬಳಿ ತಂದು ರೈತರ ಪ್ರತಿಭಟನೆ!

ಕಲಬುರಗಿ: ಜಮೀನಿಗೆ ಬಂದ ಮೊಸಳೆಯನ್ನು ಜೀವಂತವಾಗಿ ಹಿಡಿದು ಜೆಸ್ಕಾಂ ಕಚೇರಿ ಬಳಿ ತಂದು ರೈತರು ಪ್ರತಿಭಟನೆ ನಡೆಸಿರುವ ಘಟನೆ ಅಫಜಲಪುರ್ ತಾಲೂಕಿನ ಗೊಬ್ಬುರ (ಬಿ) ಜೆಸ್ಕಾಂ ಕಚೇರಿ ಬಳಿ ನಡೆದಿದೆ.

ಸದ್ಯ ಕಲಬುರಗಿಯ ರೈತರಿಗೆ ನಸುಕಿನ‌ ಜಾವ 4 ಗಂಟೆ ಸುಮಾರಿಗೆ ಜೆಸ್ಕಾಂನಿಂದ ತ್ರೀ ಫೇಸ್ ಕರೆಂಟ್‌ ನೀಡಲಾಗುತ್ತಿದೆ. ಇಂದು ನಸುಕಿನ ಜಾವ ಜಮೀನಿಗೆ ನೀರು ಬಿಡಲು ಬಂದ ರೈತನ ಮೇಲೆ‌ ಮೊಸಳೆ ದಾಳಿಗೆ‌ ಮುಂದಾಗಿದ್ದು, ಇದರಿಂದ ಕೆರಳಿದ ರೈತರು ಮೊಸಳೆಯನ್ನ ಜೀವಂತವಾಗಿ ಹಿಡಿದು ಜೆಸ್ಕಾಂ ಕಚೇರಿ ಎದುರಿಗೇ ತಂದು ರೈತರು ಪ್ರತಿಭಟನೆ‌ ನಡೆಸಿದ್ದಾರೆ.
ಕಲಬುರಗಿ ಜಿಲ್ಲೆ ಅಫಜಲಪುರ್ ತಾಲೂಕಿನ ಗೊಬ್ಬುರ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಭೀಮಾ ನದಿ ಪಾತ್ರದ ಜಮೀನುಗಳಿಗೆ ನೀರು ಬಳಸಲು ಅನುಕೂಲವಾಗುವಂತೆ ಪ್ರತಿ ದಿನ ನಸುಕಿನ ಜಾವ 4 ಗಂಟೆ ಸುಮಾರಿಗೆ ಜೆಸ್ಕಾಂ ಇಲಾಖೆ ತ್ರೀ ಫೇಸ್ ಕರೇಂಟ್ ಸರಬರಾಜು ಮಾಡುತ್ತಿದೆ. ಆದ್ರೆ ಈ ಸಮಯದಲ್ಲಿ ನದಿ ತೀರಕ್ಕೆ ಹೋಗಿ ಮೋಟಾರ್ ಆನ್ ಮಾಡುವಾಗ ಹಲವು ಬಾರಿ ರೈತರ ಮೇಲೆ‌ ಮೊಸಳೆಗಳು ದಾಳಿ ನಡೆಸಿವೆ. ಅದೇ ರೀತಿ ಇಂದು ಗ್ರಾಮದ ಲಕ್ಷ್ಮಣ ಪೂಜಾರಿ ಎಂಬ ರೈತ ತಮ್ಮ ಜಮೀನಿಗೆ ನೀರು ಬಿಡಲು ಹೋದಾಗ ಮೊಸಳೆ ದಾಳಿ ನಡೆಸಲು ಯತ್ನಿಸಿದೆ. ಇದರಿಂದ ಕೆರಳೀದ ಲಕ್ಷಣ ಅವರು ಸುತ್ತಮುತ್ತಲಿನ ರೈತರಿಗೆ ವಿಷಯ ತಿಳಿಸಿದ್ದಾರೆ. ಆಗ ಸ್ಥಳಕ್ಕೆ ಬಂದ ರೈತರು ಮೊಸಳೆಯನ್ನ ಜೀವಂತವಾಗಿ ಸೆರೆ ಹಿಡಿದಿದ್ದಾರೆ.‌

ಜೀವಂತವಾಗಿ ಸೆರೆ ಹಿಡಿದ ಮೊಸಳೆಯನ್ನು ಎತ್ತಿನ ಬಂಡಿಯಲ್ಲಿ‌ ಕಟ್ಟಿದ್ದು, ಮೊಸಳೆಯಿದ್ದ ಎತ್ತಿನ ಬಂಡಿಯನ್ನು ನೇರವಾಗಿ ಗೊಬ್ಬೂರ (ಬಿ) ಗ್ರಾಮದಲ್ಲಿರುವ ಜೆಸ್ಕಾಂ ಕಚೇರಿ ಮುಂಭಾಗಕ್ಕೆ ತಂದು ರೈತರು ಪ್ರತಿಭಟನೆ ನಡೆಸಿದ್ದಾರೆ. ಪದೇ ಪದೇ ಮೊಸಳೆಗಳು ದಾಳಿ ನಡೆಸುತ್ತಿವೆ, ಹೀಗಾಗಿ ಬೆಳಗ್ಗೆ 6 ಗಂಟೆ ನಂತರ ತ್ರೀ ಫೇಸ್ ಕರೇಂಟ್ ಸೌಲಭ್ಯ ನೀಡುವಂತೆ ಜೆಸ್ಕಾಂಗೆ ರೈತರು ಒತ್ತಾಯಿಸಿದ್ದಾರೆ.

ಸದ್ಯ ರೈತರು ಸೆರೆ ಹಿಡಿದ ಮೊಸಳೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಕಲಬುರಗಿಯ ಪ್ರಾಣಿ ಸಂಗ್ರಹಾಲಯಕ್ಕೆ ಬಿಡಲಾಗಿದೆ.