

ಡೈಲಿ ವಾರ್ತೆ: 20/ಫೆ. /2025


ವಿಕಲಚೇತನರ ವಿಶ್ವ ಚಾಂಪಿಯನ್‌ಷಿಪ್‌ಗೆ ತೆರೆಳಿದ ಹೊನ್ನಾಳದ ನಿಹಾದ್ ಮಹಮ್ಮದ್ ಇಕ್ಬಾಲ್ ಇವರಿಗೆ ಜಮಾತ್ ಬಾಂಧವರಿಂದ ಬೀಳ್ಕೊಡುಗೆ ಸಮಾರಂಭ

ಬ್ರಹ್ಮಾವರ| ಫೆ. 25 ರಂದು ನಡೆಯುವ ಅಂತರಾಷ್ಟ್ರೀಯ ವಿಕಲಚೇತನರ ಸ್ಲೋಕರ್ಸ್ ಮತ್ತು ಬಿಲಿಯರ್ಡ್ಸ್ ಇದರ ಸ್ಪರ್ಧೆಗೆ ಬ್ಯಾಂಕಾಕ್ ಗೆ ತೆರಳುತ್ತಿರುವ ಹೊನ್ನಾಳದ ಯುವಕ ನಿಹಾದ್ ಮಹಮ್ಮದ್ ಇಕ್ಬಾಲ್ ಇವರಿಗೆ ಜಾಮಿಯಾ ಮಸೀದಿ ಹೊನ್ನಾಳ ಇದರ ಜಮಾತ್ ಬಾಂಧವರ ವತಿಯಿಂದ ಶಾಲು ಹೊಂದಿಸಿ ಶುಭ ಹಾರೈಸಿ ಬೀಳ್ಕೊಡುಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಸುಭಾನ್ ಅಹಮದ್ ಹೊನ್ನಾಳ ಮಾತನಾಡಿ ನಿಹಾಧ್ ಮುಹಮ್ಮದ್ ರವರ ಕಠಿಣ ಪರಿಶ್ರಮಕ್ಕೆ ಇಂದು ಫಲ ಸಿಕ್ಕಿದ್ದು ಅವರು ಈ ಸ್ಪರ್ಧೆಯಲ್ಲಿ ಯಶಸ್ಸನ್ನು ಗಳಿಸಿ ಭಾರತ ದೇಶಕ್ಕೆ ಹೆಸರನ್ನು ತರಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಮಸೀದಿಯ ಇಮಾಮ ರಾದ ಮೌಲಾನ ಮಹಮ್ಮದ್ ಅಲಿ ಬರಕಾತಿ ಅಧ್ಯಕ್ಷರಾದ ಮೊಹಮ್ಮದ್ ರಫೀಕ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಖತ್ತಾಭ್ ಊರಿನ ಹಿರಿಯರಾದ ಬಿ ಆರ್ ಬಾಶು ಸಾಹೇಬ್, ಮುಹಮ್ಮದ್ ಇಕ್ಬಾಲ್, ಬಿಎಸ್ ಸುಭಾನ್, ಮೊಹಮ್ಮದ್ ಇಮ್ತಿಯಾಜ್, ಇಸ್ಮಾಯಿಲ್, ಅಬ್ದುಲ್ ಸಮದ್ ಶಮ್ಮು, ಅಬ್ದುಲ್ ಸಮ್ಮದ್ ಹೊನ್ನಾಳ, ಮುಜಮ್ಮಿಲ್, ಜಿಯಾಉಲ್ಲಾ, ಮೊಹಮ್ಮದ್ ಸಾದ್ ಅಲಿ, ಮಹಮ್ಮದ್ ಶೇರಾಜ್, ಹಾಗೂ ಇತರರು ಉಪಸ್ಥಿತರಿದ್ದರು.
ಹೊನ್ನಾಳದ ಯುವಕ ನಿಹಾದ್ ಮಹಮ್ಮದ್ ಇಕ್ಬಾಲ್ ಯಾರು.? ಹಾಗೂ ಅವರ ಹಿನ್ನಲೆ: ಕ್ಯಾಟರಿಂಗ್‌ನಲ್ಲಿ ಕೆಲಸ ಮಾಡುವ ಹೊನ್ನಾಳದ ಇಕ್ಬಾಲ್ ಹಾಗೂ ಇರ್ಷಾದ್ ಬೇಗಂ ಅವರ ಪುತ್ರ ನಿಹಾದ್ ಮೊಹಮ್ಮದ್ ಇವರು ಅಂಡಿಗಳಿಗೆ ಬಟ್ಟೆ ಮಾರಾಟ ಮಾಡುವ ಸೇಲ್ಸ್ ಮ್ಯಾನ್ ಕೆಲಸ ಮಾಡುತ್ತಿದ್ದರು. ಆದರೆ ದುರದೃಷ್ಟ ನಿಹಾದ್‌ಗೆ 2022ರ ಮಳೆಗಾಲ ಬದುಕಿನ ಅನ್ನವನ್ನೇ ಕಸಿದುಕೊಳ್ಳುತ್ತದೆ ಎಂದು ಗೊತ್ತೇ ಇರಲಿಲ್ಲ.

ಅಪಘಾತದಲ್ಲಿ ಕಾಲು ಕಳೆದುಕೊಂಡ ಹೊನ್ನಾಳದ ನಿಹಾದ್ ಮೊಹಮ್ಮದ್:
ಎರಡು ವರ್ಷಗಳ ಹಿಂದೆ ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದಾರೆ.
ಕೋಟೇಶ್ವರ ಫ್ಲೈ ಓವರ್‌ನಲ್ಲಿ ಸಾಗುತ್ತಿರುವಾಗ ಸ್ಕೂಟರ್ ಸ್ಕಿಡ್ ಆಗಿ ಕಾಲು ಡಿವೈಡರ್‌ಗೆ ಬಡಿಯಿತು. ಚಿಕಿತ್ಸೆ ಪಡೆದು ಚೇತರಿಸಿಕೊಳ್ಳಲಿದೆ ಎನ್ನುವಾಗಲೇ ಕಾಲಿನಲ್ಲಿ ನಂಜು ಆವರಿಸಿ ಕಾಲನ್ನೇ ಕತ್ತರಿಸಬೇಕಾದ ಸ್ಥಿತಿ ನಿರ್ಮಣವಾಯಿತು. ಆ ಮೂಲಕ ಬಡವರ ಮನೆಗೆ ಆಘಾತ ಬಂದು ಅಪ್ಪಳಿಸಿದಂತಾಯಿತು.

ನಿಹಾದ್ ಮೊಹಮ್ಮದ್ ಸ್ನೂಕರ್‌ನಲ್ಲಿ ತೊಡಗಿಸಿಕೊಂಡಿದ್ದು ಅಚ್ಚರಿ: ಅಪಘಾತಕ್ಕೂ ಮುನ್ನ ಮಕ್ಕಳು ಆಡುವ ಪೂಲ್‌ಗಳಲ್ಲಿ ಟೈಂ ಪಾಸ್‌ಗಾಗಿ ಆಡುತ್ತಿದ್ದರು. ನಂತರ ಮಣಿಪಾಲದಲ್ಲಿ ಅಭ್ಯಾಸ ಮಾಡುವ ಅವಕಾಶ ಸಿಕ್ಕಿತು. ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದಕ್ಕಾಗಿ ಅವರು ಆಡುತ್ತಿರಲಿಲ್ಲ. ಆದರೆ ಅಪಘಾತದಲ್ಲಿ ಕಾಲು ಕಳೆದುಕೊಂಡ ನಂತರ ಬೆಂಗಳೂರಿನಲ್ಲಿನ ನಡೆದ ಪ್ಯಾರಾ ಸ್ನೂಕರ್ ಹಾಗೂ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಂಡ ನಿಹಾದ್ ಅಲ್ಲಿ ಕಂಚಿನ ಪದಕ ಗೆಲ್ಲುತ್ತಾರೆ. ಅವರಿಗೆ ಅಂತಾರಾಷ್ಟ್ರೀಯ ಪ್ಯಾರಾ ಬಿಲಿಯರ್ಡ್ಸ್ ತಾರೆ ಲೋಕೇಶ್ ಅವರು ಸ್ಪರ್ಧೆಗಳ ಬಗ್ಗೆ ಮಾಹಿತಿ ಕೊಡುತ್ತಾರೆ. ಉತ್ತಮ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ನಿಹಾದ್ ಥಾಯ್ಲೆಂಡ್‌ನಲ್ಲಿ ನಡೆಯಲಿರುವ ದಿವ್ಯಾಂಗರ ಮೊದಲ ವಿಶ್ವ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ 12 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾರೆ.
ನೆರವಾದ ಮಣಿಪಾಲದ ಆಶ್ಲೇಷ್ ಶೆಣೈ: ನಿಹಾದ್ ಅವರು ವಿಶ್ವ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಮಣಿಪಾಲದ ಆಶ್ಲೇಷ್ ಹೊಟೇಲ್‌ನ ಮಾಲೀಕ ಆಶ್ಲೇಷ್ ಶೆಣೈ ಅವರು ನಿಹಾದ್ ಅವರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ತಮ್ಮಿಂದಾದ ಸಹಾಯ ಮಾಡಿದ್ದಾರೆ.
ಊರವರ ಪ್ರೋತ್ಸಾಹ: ನಿಹಾದ್ ಅವರು ಪ್ಯಾರಾ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಭಾರತ ತಂಡಕ್ಕೆ ಆಯ್ಕೆಯಾಗುತ್ತಿದ್ದಂತೆ ಎಲ್ಲಿರಿಗೂ ಖುಷಿಯಾದರೆ ಅವರ ಹೆತ್ತವರಿಗೆ ಖುಷಿಯ ಜೊತೆಗೆ ಬೇಸರವೂ ಆಯಿತು. ಏಕೆಂದರೆ ಅವರ ಪ್ರಯಾಣದ ವೆಚ್ಚ ಭರಿಸಲು ಹಣವಿಲ್ಲ ಎಂಬ ಚಿಂತೆ. ಆದರೆ ಹೊನ್ನಾಳ ಊರಿನವರು ನಿಹಾದ್ ಅವರಿಗೆ ನೆರವಾಗಿದ್ದಾರೆ. ಎಲ್ಲರೂ ತಮ್ಮ ಕೈಯಿಂದ ನೆರವು ನೀಡಿದ್ದಾರೆ. ಇದರಿಂದಾಗಿ ಗುರುವಾರ ಸಂಜೆ ಬೆಂಗಳೂರಿಗೆ ಹೊರಟ ನಿಹಾದ್ ಶುಕ್ರವಾರ ರಾತ್ರಿ ಬ್ಯಾಂಕಾಕ್‌ಗೆ ಪ್ರಯಾಣಿಸಲಿದ್ದಾರೆ.