

ಡೈಲಿ ವಾರ್ತೆ: 21/ಫೆ. /2025


ಫೆ. 25, 26ರಂದು ತೆಕ್ಕಟ್ಟೆ ವಿಶ್ವ ವಿನಾಯಕ ಸಿಬಿಎಸ್‍ಸಿ ಸ್ಕೂಲ್ ನಲ್ಲಿ ‘ಸ್ಪೇಸ್ ಆನ್ ವೀಲ್ಸ್’ ವಿಜ್ಞಾನ ವಸ್ತು ಪ್ರದರ್ಶನ

ಕುಂದಾಪುರ| ವಿಶ್ವ ವಿನಾಯಕ ನ್ಯಾಶನಲ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ತೆಕ್ಕಟ್ಟೆ ಇದರ ಆಶ್ರಯದಲ್ಲಿ ಇಸ್ರೋ ಬೆಂಗಳೂರು ಪ್ರಾಯೋಜಿತ ‘ಸ್ಪೇಸ್ ಆನ್ ವೀಲ್ಸ್’ ವಿಜ್ಞಾನ ವಸ್ತು ಪ್ರದರ್ಶನ ತೆಕ್ಕಟ್ಟೆ ವಿಶ್ವ ವಿನಾಯಕ ಸಿಬಿಎಸ್‍ಸಿ ಸ್ಕೂಲ್ ವಠಾರದಲ್ಲಿ ಫೆ.25, ಹಾಗೂ 26ರಂದು ನಡೆಯಲಿದೆ ಎಂದು ಶಾಲೆಯ ಪ್ರಾಂಶುಪಾಲ ನಿತಿನ್ ಹೇಳಿದರು.
ಕುಂದಾಪುರ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಸ್ರೋ ಸಂಸ್ಥೆಯ ವಿಜುವಲ್ ಡಾಕ್ಯುಮೆಂಟೇಶನ್ ಮತ್ತು ಔಟ್ ರೀಚ್ ಘಟಕದ ಮುಖ್ಯಸ್ಥ ಪಿ.ವಿ.ಎನ್. ಮೂರ್ತಿ ನೇತೃತ್ವದಲ್ಲಿ ಆಕಾಶಕಾಯಗಳ ಮಾಹಿತಿಯನ್ನೊಳಗೊಂಡ ಮಾದರಿಗಳ ಎರಡು ಬಸ್ಸುಗಳನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿ ಇಡಲಾಗುವುದು. ಈ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಆಕಾಶಕಾಯಗಳ ಮಾಹಿತಿಯೊಂದಿಗೆ ಇಸ್ರೋ ಸಂಸ್ಥೆಯ ಕಾರ್ಯವೈಖರಿ, ಬಾಹ್ಯಾಕಾಶ ವಿಜ್ಞಾನ ಹಾಗೂ ಇಸ್ರೋ ಸಂಸ್ಥೆಯಲ್ಲಿರುವ ಉದ್ಯೋಗಾವಕಾಶಗಳ ಬಗ್ಗೆ ಇಸ್ರೋ ಸಂಸ್ಥೆಯ ವಿಜ್ಞಾನಿಗಳು ಹಾಗೂ ತಂತ್ರಜ್ಞರು ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು.
ಕುಂದಾಪುರ ಮತ್ತು ಬ್ರಹ್ಮಾವರ ವಲಯದ 6 ರಿಂದ 9ನೇ ತರಗತಿವರೆಗಿನ ಮಕ್ಕಳಿಗೆ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಲು ಇಲಾಖೆ ವತಿಯಿಂದ ಅನುಮತಿ ನೀಡಲಾಗಿದ್ದು, ಶಾಲಾ ಮಕ್ಕಳನ್ನು ಕರೆ ತರಲು ಬಸ್ಸಿನ ವ್ಯವಸ್ಥೆ ಇಲ್ಲದೆ ಇರುವ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಸಂಸ್ಥೆಯ ವತಿಯಿಂದ ಮಕ್ಕಳನ್ನು ಕರೆ ತರಲು ಬಸ್ಸಿನ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರಿಗೆ ವಿಜ್ಞಾನ ವಸ್ತು ಪ್ರದರ್ಶನ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಕೆ., ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಇಸ್ರೋ ಸಂಸ್ಥೆಯ ವಿಜುವಲ್ ಡಾಕ್ಯುಮೆಂಟೇಶನ್ ಮತ್ತು ಔಟ್ ರೀಚ್ ಘಟಕದ ಮುಖ್ಯಸ್ಥ ಪಿ.ವಿ.ಎನ್. ಮೂರ್ತಿ, ಬೆಂಗಳೂರಿನ ದುರ್ಗಾಪರಮೇಶ್ವರಿ ಎಜುಕೇಶನಲ್ ಟ್ರಸ್ಟ್‍ನ ಚೇರ್‍ಮೆನ್ ಡಾ.ಜಯರಾಮ ಶೆಟ್ಟಿ ಎಸ್., ತೆಕ್ಕಟ್ಟೆ ಗ್ರಾಪಂ ಅಧ್ಯಕ್ಷೆ ಶೋಭನಾ ಶೆಟ್ಟಿ, ಶಾಲೆಯ ಅಕಾಡೆಮಿಕ್ ಡೈರೆಕ್ಟರ್ ದಿವಾಕರ ಶೆಟ್ಟಿ ಎಚ್. ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿಶ್ವ ವಿನಾಯಕ ನ್ಯಾಶನಲ್ ಇಂಗ್ಲೀಷ್ ಮೀಡಿಯಂ ಸ್ಕೂಲ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಎಂ.ಪ್ರಭಾಕರ ಶೆಟ್ಟಿ ಹೇಳಿದರು.