

ಡೈಲಿ ವಾರ್ತೆ: 22/ಫೆ. /2025


ಹಸಿ ಮೆಣಸಿನಕಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಪ್ರಯೋಜನ ? ಇಲ್ಲಿದೆ ಮಾಹಿತಿ

ಹಸಿ ಮೆಣಸಿನಕಾಯಿ ಅಡುಗೆಗೆ ರುಚಿ, ಪರಿಮಳ ನೀಡುವುದಲ್ಲದೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಸಹಕಾರಿಯಾಗಿದೆ. ಇದರಲ್ಲಿ ಕಬ್ಬಿಣ, ಪೊಟ್ಯಾಸಿಯಮ್, ವಿಟಮಿನ್ ಸಿ, ಎ, ಬಿ 5 ಮುಂತಾದ ಪೋಷಕಾಂಶಗಳು ಹೇರಳವಾಗಿವೆ. ಹಾಗಾಗಿ ಇದರ ಸೇವನೆ ಮಾಡುವುದು ದೇಹಕ್ಕೆ ತುಂಬಾ ಒಳ್ಳೆಯದು ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ನಿಮ್ಮ ದೈನಂದಿನ ಆಹಾರದಲ್ಲಿ ಹಸಿರು ಮೆಣಸಿನಕಾಯಿಗಳನ್ನು ಬಳಸುವುದರಿಂದ ಸಿಗುವ ಪ್ರಯೋಜನಗಳೇನು? ದಿನಕ್ಕೆ ಎಷ್ಟು ಹಸಿ ಮೆಣಸಿನಕಾಯಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.
ಮೆಣಸಿನಕಾಯಿಗಳಲ್ಲಿ ಫೈಬರ್ ಸಮೃದ್ಧವಾಗಿದೆ, ಇದು ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹಸಿ ಮೆಣಸಿನಕಾಯಿ ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವುದರಿಂದ ತೂಕ ನಿಯಂತ್ರಣಕ್ಕೂ ಉಪಯುಕ್ತವಾಗಿದೆ. ಬೊಜ್ಜು ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಒಣ ಮೆಣಸಿನಕಾಯಿಗಳ ಬದಲು ಹಸಿ ಮೆಣಸಿನಕಾಯಿಗಳನ್ನು ಬಳಸುವುದು ಬಹಳ ಉತ್ತಮ ಎಂದು ಹೇಳುತ್ತಾರೆ. ಇದು ತೂಕ ನಷ್ಟಕ್ಕೆ ಬಹಳ ಉಪಯುಕ್ತವಾಗಿದೆ.
ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಸಿ ಮೆಣಸಿನಕಾಯಿಯಲ್ಲಿರುವ ವಿಟಮಿನ್ ಸಿ ಬಹಳ ಉಪಯುಕ್ತವಾಗಿದೆ. ಇವುಗಳ ಸೇವನೆಯು ಸುಕ್ಕು, ಮೊಡವೆ ಮತ್ತು ಮುಖದ ಮೇಲಿನ ಕಲೆಗಳನ್ನು ಕಡಿಮೆ ಮಾಡುತ್ತದೆ. ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಚರ್ಮವನ್ನು ತಾಜಾ ಮತ್ತು ಹೊಳೆಯುವಂತೆ ಮಾಡುತ್ತದೆ.
ಹಸಿ ಮೆಣಸಿನಕಾಯಿಯಲ್ಲಿ ವಿಟಮಿನ್ ಎ ಅಧಿಕವಾಗಿರುವುದರಿಂದ, ಇದು ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ. ಆದ್ದರಿಂದ ದಿನಕ್ಕೆ ಎರಡರಿಂದ ಮೂರು ಹಸಿರು ಮೆಣಸಿನಕಾಯಿಗಳನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಹಸಿರು ಮೆಣಸಿನಕಾಯಿಗಳಲ್ಲಿ ಬೀಟಾ- ಕ್ಯಾರೋಟಿನ್, ಲುಟೀನ್ ಜಿಯಾಕ್ಸಾಂಥಿನ್ ಮತ್ತು ಕ್ರಿಪ್ಟೋಕ್ಸಾಂಥಿನ್ ನಂತಹ ಸಾಕಷ್ಟು ಆರೋಗ್ಯಕರ ಪೋಷಕಾಂಶಗಳಿವೆ. ಅದಕ್ಕಾಗಿಯೇ ಹಸಿರು ಮೆಣಸಿನಕಾಯಿಯನ್ನು ಆಹಾರದ ಭಾಗವಾಗಿ ತಿನ್ನುವುದು ಉತ್ತಮ ಎಂದು ಹೇಳಲಾಗುತ್ತದೆ.
ಇದು ಕ್ಯಾನ್ಸರ್ ಸಮಸ್ಯೆಯನ್ನು ಸಹ ತಪ್ಪಿಸಬಹುದು ಎಂದು ತಜ್ಞರು ಹೇಳುತ್ತಾರೆ. ಹಸಿರು ಮೆಣಸಿನಕಾಯಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹವನ್ನು ಫ್ರೀ ರಾಡಿಕಲ್ಗಳಿಂದ ರಕ್ಷಿಸುತ್ತವೆ ಮತ್ತು ಕ್ಯಾನ್ಸರ್ ಅಪಾಯ ಬರದಂತೆ ತಡೆಯುತ್ತದೆ. ಇದಲ್ಲದೆ, ಜೀರ್ಣಾಂಗ ವ್ಯವಸ್ಥೆಯನ್ನು ಸರಾಗವಾಗಿ ನಡೆಸಲು ಹಸಿರು ಮೆಣಸಿನಕಾಯಿಗಳು ಬಹಳ ಉಪಯುಕ್ತವಾಗಿವೆ.
ಆದರೆ ಅತಿಯಾಗಿ ಹಸಿ ಮೆಣಸಿನಕಾಯಿಗಳನ್ನು ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಲಾಗುತ್ತದೆ. ಅದಲ್ಲದೆ ಪ್ರತಿನಿತ್ಯ ಒಂದು ಪ್ರಮಾಣಕ್ಕಿಂತ ಹೆಚ್ಚು ಹಸಿ ಮೆಣಸಿನ ಸೇವನೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು ಹಾಗಾಗಿ ಅತಿಯಾಗಿ ಸೇವನೆ ಮಾಡಬೇಡಿ.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳ ಮಾಹಿತಿಯನ್ನು ಆಧರಿಸಿದೆ. ಡೈಲಿ ವಾರ್ತೆ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.