ಡೈಲಿ ವಾರ್ತೆ: 21/ಫೆ. /2025

ಚಾಮುಂಡಿಬೆಟ್ಟದಲ್ಲಿ ಭಾರೀ ಬೆಂಕಿ: ಅಗ್ನಿಶಾಮಕ ಸಿಬ್ಬಂದಿಯಿಂದ ಕಾರ್ಯಾಚರಣೆ

ಮೈಸೂರು: ಚಾಮುಂಡಿಬೆಟ್ಟದ ಉತ್ತನಹಳ್ಳಿ ಭಾಗದ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ಮರ-ಗಿಡಗಳು, ಕಾಡು ಪ್ರಾಣಿಗಳಿಗೆ ಹಾನಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.

ಚಾಮುಂಡಿಬೆಟ್ಟವು ಸಾವಿರಾರು ಎಕರೆ ಅರಣ್ಯ ಪ್ರದೇಶ ಹೊಂದಿದೆ. ಬೇಸಿಗೆ ಹಿನ್ನೆಲೆಯಲ್ಲಿ ಮರ-ಗಿಡಗಳು, ಎಲೆಗಳು ಒಣಗಿದ್ದು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಇದರಿಂದ ಅಪರೂಪದ ಔಷಧೀಯ ಸಸ್ಯಗಳು, ಪ್ರಾಣಿಗಳ ಜೀವ ಹಾನಿಯಾಗಿದೆ. ಈ ಬೆಂಕಿಯಿಂದ ಚಾಮುಂಡಿಬೆಟ್ಟದ ಕೆಲವು ಪ್ರದೇಶಗಳಲ್ಲಿ ದಟ್ಟ ಹೊಗೆ ಆವರಿಸಿದೆ. ಅಗ್ನಿಶಾಮಕ ಸಿಬ್ಬಂದಿ ಮೂರು ವಾಹನಗಳ ಮೂಲಕ ಸತತ ಆರು ಗಂಟೆಗೂ ಹೆಚ್ಚು ಸಮಯದಿಂದ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.