

ಡೈಲಿ ವಾರ್ತೆ: 25/ಫೆ. /2025


ಭೀಕರ ರಸ್ತೆ ಅಪಘಾತ| ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ ವಿಜಯಪುರ ಜಿಲ್ಲೆಯ ಇಬ್ಬರು ಮೃತ್ಯು!

ವಿಜಯಪುರ: ಉತ್ತರಪ್ರದೇಶದ ಪ್ರಯಾಗರಾಜ್ ನಲ್ಲಿ
ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ನಡೆದ ರಸ್ತೆ ಅಪಘಾತದಲ್ಲಿ ಜಿಲ್ಲೆಯ ಇಬ್ಬರು ಮೃತಪಟ್ಟ ಘಟನೆ ಫೆ. 24 ರಂದು ಸೋಮವಾರ ತಡರಾತ್ರಿ ನಡೆದಿದೆ.
ಚಡಚಣ ಪಟ್ಟಣದ ವಿಶ್ವನಾಥ ಅವಜಿ (55) ಹಾಗೂ ಮಲ್ಲಿಕಾರ್ಜುನ ಸದ್ದಲಗಿ (40) ಎಂಬುವವರೇ ಮೃತರೆಂದು ಗುರುತಿಸಲಾಗಿದೆ.
ಚಡಚಣದಿಂದ ತೆರಳಿದ್ದ ಯಾತ್ರಾರ್ಥಿಗಳ ವಾಹನವು ಗುಜರಾತ್ ರಾಜ್ಯದ ಪೋರ್ ಬಂದರ್ ಸಮೀಪ ನಿಂತಿದ್ದ ಟಿಪ್ಪರ್ ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಮ್ಯಾಕ್ಸಿ ಕ್ಯಾಬ್ ನಲ್ಲಿ ಒಟ್ಟು 17 ಮಂದಿ ಪ್ರಯಾಣಿಸುತ್ತಿದ್ದರು. ಇಬ್ಬರು ಯಾತ್ರಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ನಾಲ್ವರು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪೋರ್ ಬಂದರ್ ನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದೆ.