


ಡೈಲಿ ವಾರ್ತೆ: 25/ಫೆ. /2025


ಮೂಡುಬೆಳ್ಳೆ|ಟಿಪ್ಪರ್ ಪಲ್ಟಿ, ಚಾಲಕ ಸ್ಥಳದಲ್ಲೇ ಮೃತ್ಯು
ಉಡುಪಿ: ಟಿಪ್ಪರ್ ಪಲ್ಟಿಯಾಗಿ ಚಾಲಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟಿಂಗೇರಿ ಗಣಪಣಕಟ್ಟೆ ತಿರುವಿನ ಬಳಿ ಮಂಗಳವಾರ ಮುಂಜಾನೆ ನಡೆದಿದೆ.
ಮೃತರನ್ನು ಬೈಂದೂರಿನ ಸುಬ್ರಮಣ್ಯ ಆಚಾರ್ಯ (40) ಎಂದು ಗುರುತಿಸಲಾಗಿದೆ. ಮಂಗಳವಾರ ಮುಂಜಾನೆ 4 ಗಂಟೆಯ ಸುಮಾರಿಗೆ ಈ ದುರ್ಘಟನೆ ನಡೆದಿದೆ.
ಟಿಪ್ಪರ್ ಬೈಂದೂರಿನಿಂದ ಪಳ್ಳಿಯ ಕೋರೆಗೆ ಜಲ್ಲಿ ತರಲು ಹೋಗುತ್ತಿದ್ದ ವೇಳೆ ಆಕಸ್ಮತ್ತಾಗಿ ರಸ್ತೆಯಲ್ಲೇ ಪಲ್ಟಿಯಾಗಿದೆ. ಪರಿಣಾಮ ಚಾಲಕ ಸುಬ್ರಮಣ್ಯ ಟಿಪ್ಪರ್ ಅಡಿಗೆ ಬಿದ್ದು ಸ್ಥಳದಲ್ಲೇ ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಘಟನೆ ನಡೆದ ಬಳಿಕ ಸ್ಥಳಕ್ಕೆ ಧಾವಿಸಿದ ಬೆಳ್ಳೆ ಗ್ರಾಮ ಪಂಚಾಯತ್ ಸದಸ್ಯರಾದ ಗುರುರಾಜ್ ಭಟ್, ಸುಧಾಕರ ಪೂಜಾರಿ, ಕೃಷ್ಣ ಆಚಾರ್ಯ ಹಾಗೂ ಶಿರ್ವ ಪೊಲೀಸ್ ಸಿಬ್ಬಂದಿಯವರ ಸಹಕಾರದೊಂದಿಗೆ ಜೆಸಿಬಿ ಮೂಲಕ ಲಾರಿಯನ್ನು ಎತ್ತಿ ಚಾಲಕನ ಮೃತ ದೇಹವನ್ನು ಹೊರತೆಗೆದು ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ಕಳಿಸಲಾಯಿತು. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.