

ಡೈಲಿ ವಾರ್ತೆ: 01/ಮಾರ್ಚ್ /2025


ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ – ವಿವಿಧ ಸಂಘಟನೆಗಳ ವತಿಯಿಂದ ಫರಂಗಿಪೇಟೆ ಜಂಕ್ಷನ್ ನಲ್ಲಿ ಪ್ರತಿಭಟನೆ

ಬಂಟ್ವಾಳ: ಫರಂಗಿಪೇಟೆ ಸಮೀಪದ ಕಿದೆಬೆಟ್ಟು ಪದ್ಮನಾಭ ಮಡಿವಾಳ ಅವರ ಪುತ್ರ ಪಿಯುಸಿ ವಿದ್ಯಾರ್ಥಿ ದಿಗಂತ್ ಅವರ ನಿಗೂಡ ನಾಪತ್ತೆಯಾಗಿ 5 ದಿನಗಳು ಕಳೆದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಶನಿವಾರ ಫರಂಗಿಪೇಟೆ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಮಾತನಾಡಿ, ಹದಿಹರೆಯದ ಬಾಲಕ ಬಾಲಕಿಯರ ನಾಪತ್ತೆ ಪ್ರಕರಣಗಳ ಹಿಂದೆ ಡ್ರಗ್ಸ್ ಮತ್ತು ಗಾಂಜಾದ ಕೈವಾಡ ಇರುವ ಸಾಧ್ಯತೆಗಳು ಇದ್ದು ಇದರ ವಿರುದ್ಧ ಪೋಲೀಸರು ತನಿಖೆ ಮುಂದುವರಿಸಿ ಸೂಕ್ತವಾದ ಕಾನೂನು ಕ್ರಮ ಕೈಗೊಂಡರೆ ಇಂತಹ ಘಟನೆಗಳು ಮರುಕಳಿಸಲು ಸಾಧ್ಯವಿಲ್ಲ. ಇತ್ತೀಚೆಗಿನ ದಿನಗಳಲ್ಲಿ ಪ್ರತಿಯೊಬ್ಬ ತಂದೆ ತಾಯಿಯೂ ತಮ್ಮ ಮಕ್ಕಳ ಬಗ್ಗೆ ಆತಂಕದಲ್ಲಿರಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಪೋಲೀಸ್ ಇಲಾಖೆ ದಿಗಂತ್ ನನ್ನು ತಕ್ಷಣ ಪತ್ತೆ ಹಚ್ಚಿ ನಾಪತ್ತೆ ಪ್ರಕರಣವನ್ನು ಭೇದಿಸಬೇಕಗಿದೆ ಎಂದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಶಾಸಕ ಭರತ್ ಶೆಟ್ಟಿ ಅವರು, ದಾರಿಯಲ್ಲಿ ನಡೆದುಕೊಂಡು ಹೋಗಲು ಸಾದ್ಯವಾಗದೆ ಇರುವ ಬಗ್ಗೆ ಅನೇಕ ಮಹಿಳೆಯರು ದೂರು ನೀಡಿದ್ದಾರೆ. ಆದರೆ ಪೋಲೀಸ್ ಇಲಾಖೆಯಿಂದ ಯಾವುದೇ ಸ್ಪಂದನೆ ಇಲ್ಲ, ಪೋಲೀಸ್ ಇಲಾಖೆಯ ಮೇಲೆ ಗೌರವ ಕಳೆದುಹೋಗಿದೆ ಎಂದು ಆರೋಪಿಸಿದರು. ಇದೀಗ ಯುವಕರು ಇದರ ವಿರುದ್ದ ಹೋರಾಟ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ. ಹಿಂದೂ ಯುವಕ ಯುವತಿ ನಾಪತ್ತೆ ಹಿಂದೆ ಪೋಲಿಸ್ ಇಲಾಖೆ ಮೌನವಾಗಿ ಕುಳಿತುಕೊಂಡರೆ ನಾವು ನಿಮ್ಮ ಕೆಲಸ ಮಾಡಬೇಕುತ್ತದೆ ಎಚ್ಚರಿಸಿದ ಅವರು ಕಾನೂನು ಸುವ್ಯವಸ್ಥೆ ಹದಗೆಡುವ ಮುಂಚೆ, ಕಾನೂನನ್ನು ಕೈಗೆ ತೆಗೆದುಕೊಳ್ಳುವ ಮುಂಚೆ ಇಲಾಖೆ ಎಚ್ಚೆತ್ತುಕೊಳ್ಳಿ ಎಂದರು.
ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಮಾತನಾಡಿ, ಘಟನೆ ಆದ ತಕ್ಷಣವೇ ಬಾಲಕನ ಪೋಷಕರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಪೋಲೀಸರು ಆ ಸಮಯದಲ್ಲಿ ಕೊಂಚ ನಿರ್ಲಕ್ಷ್ಯ ಮಾಡಿದ್ದಾರೆ. ಇದರಿಂದಾಗಿ ಘಟನೆ ನಡೆದು 5 ದಿನವಾದರೂ ಬಾಲಕ ಪತ್ತೆಯಾಗಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಗಾಂಜಾ ಮಾಫಿಯಾ ಮಿತಿ ಮೀರಿದೆ. ಈ ವ್ಯವಸ್ಥೆಯನ್ನು ಮಟ್ಟ ಹಾಕುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ವಿದ್ಯಾರ್ಥಿಯ ನಾಪತ್ತೆ ಪ್ರಕರಣವನ್ನು ಪೋಲೀಸರು ಆದಷ್ಟು ಬೇಗ ಪತ್ತೆಹಚ್ಚಬೇಕು ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಹಿಂದೂ ಮುಖಂಡರು, ಬಿಜೆಪಿ ನಾಯಕರಿಗೆ ಭದ್ರತೆಯಿಲ್ಲದಂತಾಗಿದೆ. ಪರಂಗಿಪೇಟೆ ಪರಿಸರ ಗಾಂಜಾ ಮಾಫಿಯಾ ಹೆಚ್ಚಾಗಿದೆ. ಈ ಹಿಂದೆಯೂ ಇಲ್ಲಿ ಬಿಜೆಪಿ ಮುಖಂಡನಿಗೆ ಮಾರಣಾಂತಿಕ ಹಲ್ಲೆಯಾಗಿತ್ತು. ಇದೀಗ ಮತ್ತೆ ಬಾಲಕ ನಾಪತ್ತೆಯಾಗಿ ಐದು ದಿನಗಳು ಕಳೆದಿವೆ. ಎರಡು ದಿನಗಳಲ್ಲಿ ಬಾಲಕನ ನಾಪತ್ತೆ ಪ್ರಕರಣ ಭೇಧಿಸದಿದ್ದರೆ ಉಗ್ರ ಪ್ರತಿಭಟನೆ ಮಾಡುತ್ತೇವೆ. ಎಂದು ಎಚ್ಚರಿಕೆ ನೀಡಿದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ, ಜಿಲ್ಲೆಯ ಪೋಲಿಸ್ ಇಲಾಖೆಯ ಮೇಲೆ ಗೌರವ ಇದೆ, ನಿಮ್ಮಲ್ಲಿ ಸಾಮರ್ಥ್ಯ ಇದೆ, ಸರಕಾರ ಸೌಲಭ್ಯ ಒದಗಿಸಿದೆ. ನಮ್ಮ ಬೇಡಿಕೆ ಇರುವಂತದ್ದು, ದಿಗಂತ್ ಎಂಬ ಯುವಕನನ್ನು ಪತ್ತೆ ಹಚ್ಚಿಕೊಡಿ, ಹಿಂದೂ ಸಂಘಟನೆಯವರು ಪ್ರತಿ ಬಾರಿಯೂ ರಸ್ತೆಗೆ ಇಳಿದು ಪ್ರತಿಭಟನೆ ಮಾಡುವ ಹಿಂದೂ ಸಮಾಜವನ್ನು ಕೆಣಕುವ ಕೆಲಸ ಮಾಡಬೇಡಿ. ಒಮ್ಮೆ ಹಿಂದೂ ಸಂಘಟನೆ ರಸ್ತೆಗಳಿದರೆ ಮುಂದೆ ಆಗಬಹುದಾದ ನಷ್ಟಕ್ಕೂ ಇಲಾಖೆಯೇ ಜವಾಬ್ದಾರರು, ಈ ವಿಚಾರದ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದರು.
ಪ್ರತಿಭಟನೆಯಲ್ಲಿ ಜಿ.ಪಂ ಮಾಜಿ ಸದಸ್ಯ ಉಮ್ಮರ್ ಫಾರೂಕ್ ಪರಂಗಿಪೇಟೆ, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಲ್ಲ, ಪ್ರಮುಖರಾದ ಪ್ರಸಾದ್ ಕುಮಾರ್ ರೈ, ರವೀಂದ್ರ ಕಂಬಳಿ, ಭರತ್ ಕುಮ್ಡೆಲು, ಉಮೇಶ್ ಶೆಟ್ಟಿ ಬರ್ಕೆ, ತಾರಾನಾಥ ಕೊಟ್ಟಾರಿ, ನಂದನ್ ಮಲ್ಯ, ಮನೋಜ್ ಆಚಾರ್ಯ ಮತ್ತಿತರರು ಭಾಗಿಯಾಗಿದ್ದರು.
ದಿಗಂತ್ ಪತ್ತೆಯಾಗುವವರೆಗೆ ನಾವು ಸುಮ್ಮನೆ ಕೂರುವುದಿಲ್ಲ ಎಸ್.ಪಿ.ಯತೀಶ್ ಎನ್: ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯತೀಶ್ ಎನ್ ಅವರು ಮಾತನಾಡಿ, ಈ ಪ್ರಕರಣ ಪ್ರತಿಭಟನೆ ಮಾಡುವ ಹಂತದವರೆಗೆ ಬರಬಾರದಿತ್ತು. ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ. ಕ್ಲಿಷ್ಟಕರವಾದ ಪ್ರಕರಣಗಳು ಸ್ವಲ್ಪ ಸಮಯ ತಗಲುತ್ತದೆ. ಜಿಲ್ಲೆಯ ವಿವಿಧ ಠಾಣೆಯ ನುರಿತ ಪೋಲೀಸರನ್ನು ಕರೆಸಿ ತನಿಖೆ ದುಪ್ಪಟ್ಟು ಗೊಳಿಸುತ್ತೇವೆ. ದಿಗಂತ್ ಪತ್ತೆಯಾಗುವವರೆಗೆ ನಾವು ಸುಮ್ಮನೆ ಕೂರುವುದಿಲ್ಲ ಎಂದರು.
ಸಾರ್ವಜನಿಕರಲ್ಲಿ ಈ ಬಗ್ಗೆ ಮಾಹಿತಿಗಳು ಇದ್ದರೆ ನಮ್ಮ ಜೊತೆ ಹಂಚಿಕೊಳ್ಳಿ, ನಮ್ಮ ಮೇಲೆ ಭರವಸೆ ಇಡಿ, ತನಿಖೆ ಮುಂದುವರಿಸಲು ನಿಮ್ಮ ಸಹಕಾರ ಇರಲಿ ಎಂದು ದ.ಕ.ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯತೀಶ್ ಎನ್ ತಿಳಿಸಿದರು.