ಡೈಲಿ ವಾರ್ತೆ: 03/ಮಾರ್ಚ್ /2025

ಕೋಟ| ನಾಗರಮಠದಲ್ಲಿ ಅಕ್ರಮವಾಗಿ ಮರಳು ಸಂಗ್ರಹ ಘಟಕ – ಸ್ಥಳೀಯರಿಂದ ಪ್ರತಿಭಟನೆ

ಕೋಟ: ಕಾವಡಿ ಸಮೀಪ ನಾಗರಮಠದಲ್ಲಿ ಅಕ್ರಮವಾಗಿ ಮರಳು ಸಂಗ್ರಹ ಘಟಕ ತೆರೆಯಲು
ಪ್ರಯತ್ನಿಸಲಾಗುತ್ತಿದೆ ಈ ಪ್ರಕ್ರೀಯೆ ಸ್ಥಗಿತಗೊಳಿಸಬೇಕು ಎಂದು ಸ್ಥಳೀಯರ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆಯಿತು.

ತಹಶೀಲ್ದಾರರು, ಗಣಿ ಅಧಿಕಾರಿಗಳು, ಪೊಲೀಸರು ಜಂಟಿಯಾಗಿ ಸ್ಥಳಕ್ಕೆ ಭೇಟಿ ನೀಡಿ ಘಟಕಕ್ಕೆ ತಡೆಯೊಡ್ಡಿದರು.

ಕಾವಡಿ ದೊಡ್ಡ ಹೊಳೆಯನ್ನು ಮುಚ್ಚಿ ಮರಳು ಸಂಗ್ರಹ ಘಟಕ ಸ್ಥಾಪಿಸಲಾಗುತ್ತಿದೆ.
ಇಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ನಿರಂತರವಾಗಿ ನೆರೆ ಸಮಸ್ಯೆ ಇದೆ. ಘಟಕ ಆರಂಭವಾದರೆ ಇನ್ನಷ್ಟು ಸಮಸ್ಯೆ ಹೆಚ್ಚಳಿದೆ ಹಾಗೂ ಇಲ್ಲಿನ ಹೊಳೆಯಲ್ಲೇ ಮುಂದೆ ಅಕ್ರಮವಾಗಿ ಮರಳುಗಾರಿಕೆ ನಡೆಯಲಿದೆ. ಆದ್ದರಿಂದ ಯಾವುದೇ ಕಾರಣಕ್ಕೆ ಈ ಪ್ರಕ್ರೀಯೆಗೆ ಅನುಮತಿ
ನೀಡಬಾರದು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಈಗ ಕಾಮಗಾರಿ ನಡೆಯುತ್ತಿರುವ ಸ್ಥಳ ಖಾಸಗಿ ಜಾಗ ಎಂದು ಮರಳುಗಾರಿಕೆ ನಡೆಸುವವರು
ಹೇಳುತ್ತಿದ್ದಾರೆ. ಖಾಸಗಿ ಸ್ಥಳವಾದರೂ ಕೂಡ ಆದರೆ ಇದುವರೆಗೆ ಯಾವುದೇ ಪರವಾನಿಗೆ
ನೀಡಿಲ್ಲ. ಮುಂದೆ ಖಾಸಗಿ ಸ್ಥಳ ಗುರುತಿಸಿ, ಕಾನೂನು ಪ್ರಕಾರ ಅನುಮತಿ ಪಡೆದು ನಡೆಸಬಹುದು. ಅಲ್ಲಿಯ ವರೆಗೆ ಯಾವುದೇ ಕಾಮಗಾರಿ ನಡೆಸುವಂತಿಲ್ಲ ಎಂದು ಬ್ರಹ್ಮಾವರ
ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ ತಿಳಿಸಿದರು.


ಗ್ರಾಮಸ್ಥರ ಆಕ್ಷೇಪವಿರುವ ಕುರಿತು ಹಾಗೂ ಮುಂದೆ ಯಾವುದೇ ಮರಳುಗಾರಿಕೆ ಚಟುವಟಿಕೆಗೆ ಅವಕಾಶ ನೀಡಬಾರದು ಎನ್ನುವ ಗ್ರಾಮಸ್ಥರ ಆಗ್ರಹವನ್ನು ಮೇಲಾಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ಗಣಿ ಅಧಿಕಾರಿ ಅಶ್ವಿನಿ ತಿಳಿಸಿದರು.

ಗ್ರಾಮಸ್ಥರಿಗೆ ಮುಂದೆ ಸಮಸ್ಯೆ ನೀಡಿದರೆ ಕಾನೂನು
ಕ್ರಮಕೈಗೊಳ್ಳುವುದಾಗಿ ಕೋಟ ಠಾಣಾ ಉಪನಿರೀಕ್ಷಕ ರಾಘವೇಂದ್ರ ತಿಳಿಸಿದರು.

ವಡ್ಡರ್ಸೆ ಗ್ರಾ.ಪಂ.ಅಧ್ಯಕ್ಷ ಲೋಕೇಶ್ ಕಾಂಚನ್, ಕೋಟ ಆರ್.ಐ. ಮಂಜು ಬಿಲ್ಲವ, ಕ್ರೈಂ ವಿಭಾಗದ ಉಪನಿರೀಕ್ಷಕಿ ಸುಧಾ ಪ್ರಭು, ಸಾಮಾಜಿಕ ಹೋರಾಟಗಾರ ನಾಗರಾಜ್ ಗಾಣಿಗ ಸಾಲಿಗ್ರಾಮ, ಪಂಚಾಯತ್ ಸದಸ್ಯ ಪ್ರವೀಣ, ಚಂದ್ರ ಮರಕಾಲ, ಚಂದ್ರ, ಮೊದಲಾದವರಿದ್ದರು.