

ಡೈಲಿ ವಾರ್ತೆ: 05/ಮಾರ್ಚ್ /2025


ರಿಪ್ಪನ್‌ಪೇಟೆ| ಗಂಡು ಮಗು ಆಗಿಲ್ಲವೆಂದು ಪತ್ನಿ ಮೇಲೆ ಮರಣಾಂತಿಕ ಹಲ್ಲೆ – ಪ್ರಕರಣ ದಾಖಲು

ಶಿವಮೊಗ್ಗ: ಗಂಡು ಮಗು ಆಗಿಲ್ಲ ಎಂಬ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹೊಸನಗರ ತಾಲೂಕಿನ ಅರಸಾಳು ಗ್ರಾಮದಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಅರಸಾಳು ಗ್ರಾಮದ ಕಿರಣ್ ಡಿಸೋಜಾ, ಅತ್ತೆ ಸೂರಿನ್ ಡಿಸೋಜಾ, ನಾದಿನಿ ನಿರ್ಮಲ ಮತ್ತು ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಪ್ರಕರಣ ದಾಖಲಾಗಿದೆ.
ಅರಸಾಳು ಗ್ರಾಮದ ಸುನೀತಾ ಡಿಸೋಜ ಎಂಬ ಮಹಿಳೆಗೆ ಪತಿ ಕಿರಣ್ ಡಿಸೋಜಾ ಹಾಗೂ ಅತ್ತೆ ಮತ್ತು ನಾದಿನಿಯ ಕುಮ್ಮಕ್ಕಿನಿಂದ ಮಾನಸಿಕ ಕಿರುಕುಳ ನೀಡುವುದರೊಂದಿಗೆ ಮಾರಣಾಂತಿಕ ಹಲ್ಲೆ ನಡೆಸಿ ಮಗುವನ್ನು ಸಾಯಿಸಲು ಹಲವಾರು ಬಾರಿ ಪ್ರಯತ್ನಪಟ್ಟಿದ್ದಾರೆ ಎಂದು ದೂರು ದಾಖಲಾಗಿದೆ.
ಸುನೀತಾ ಡಿಸೋಜಾ ಈಗಾಗಲೇ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದು, ಇದೇ ಕಾರಣಕ್ಕೆ ಮಾನಸಿಕ ಹಿಂಸೆ ನೀಡುತ್ತಿದ್ದ ಪತಿ ಹಾಗೂ ಮನೆಯವರು ಹಲವು ಬಾರಿ ಮನಸೋ ಇಚ್ಚೆ ಥಳಿಸಿದ್ದರು. ಹೆಣ್ಣು ಮಗುವಿನ ಕಾಲು ಹಿಡಿದು ನೆಲಕ್ಕೆ ಬಡಿದು ಸಾಯಿಸಲು ಪ್ರಯತ್ನಿಸಿದ್ದರು ಎಂದು ನೊಂದ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಶನಿವಾರ ಅರಸಾಳು ಚರ್ಚ್ ನಲ್ಲಿ ಪ್ರಾರ್ಥನೆ ಮುಗಿಸಿಕೊಂಡು ಮನೆಗೆ ಹೋದ ಸುನೀತಾ ಡಿಸೋಜಾ ಅವರ ಮೇಲೆ ಅತ್ತೆ ಮತ್ತು ಪತಿ ನಡುರಸ್ತೆಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆಕೆಯ ತಮ್ಮ ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್ ಗೆ ದಾಖಲಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.