


ಡೈಲಿ ವಾರ್ತೆ: 14/ಮಾರ್ಚ್ /2025


ಬಸ್ನಲ್ಲಿ ಎಲೆ ಅಡಿಕೆ ತಿಂದು
ಉಗಿದ ಮಹಿಳೆ: ಮಾತಿಗೆ ಮಾತು ಬೆಳೆದು ಕಂಡಕ್ಟರ್-ಪ್ರಯಾಣಿಕರ ನಡುವೆ ಹೊಡೆದಾಟ

ತುಮಕೂರು: ಮಹಿಳೆಯೊಬ್ಬರು ಕೆಎಸ್ಆರ್ಟಿಸಿ ಬಸ್ ನಲ್ಲಿ ಎಲೆ ಅಡಿಕೆ ಎಂಜಲು ಉಗಿದ ಸಂಬಂಧ ಮಾತಿಗೆ ಮಾತು ಬೆಳೆದು ಕಂಡಕ್ಟರ್ ಹಾಗೂ ಪ್ರಯಾಣಿಕರ ನಡುವೆ ಮಾರಾಮಾರಿಯಾಗಿರುವ ಘಟನೆ ತುಮಕೂರು ಜಿಲ್ಲೆ ಪಾವಗಡ ಪಟ್ಟಣದಲ್ಲಿ ನಡೆದಿದೆ.
ಪಾವಗಡದಿಂದ ತುಮಕೂರು ಕಡೆಗೆ ಹೊರಟ್ಟಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಬೆಂಗಳೂರಿಗೆ ಹೋಗಬೇಕಿದ್ದ 6 ಜನ ಪ್ರಮಾಣಿಕರು ಕುಳಿತುಕೊಂಡಿದ್ದರು. ಆದ್ರೆ, ಈ ಬಸ್ ಬೆಂಗಳೂರಿಗೆ ಹೋಗಲ್ಲ ತುಮಕೂರಿಗೆ ಹೋಗುತ್ತೆ ಇಳಿಯಿರಿ ಎಂದು ಕಂಡಕ್ಟರ್ ಹೇಳಿದ್ದಾರೆ. ಇಳಿಯುವ ವೇಳೆ ಮಹಿಳೆ ಬಸ್ ಒಳಗೆ ಎಲೆ ಅಡಿಕೆ ಉಗಿದಿದ್ದಾಳೆ.
ಇದನ್ನು ಕಂಡ ಕಂಡಕ್ಟರ್ ಮಹಿಳೆಗೆ ಬೈದಿದ್ದಾನೆ. ಅಲ್ಲದೇ ಕ್ಲೀನ್ ಮಾಡುವಂತೆ ಮಹಿಳೆಗೆ ತಾಕೀತು ಮಾಡಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದ ಗಲಾಟೆ ಶುರುವಾಗಿದೆ. ಬಳಿಕ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಮಹಿಳೆ ಕಡೆಯವರು ಬಸ್ ನಿರ್ವಾಹಕ ಅನಿಲ್ ಕುಮಾರ್ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಘಟನೆ ಸಂಬಂಧ ಪಾವಗಡ ಕೆಎಸ್ಆರ್ಸಿ ಡಿಪೋ ಕಂಡಕ್ಟರ್ ಅನಿಲ್ ಕುಮಾರ್ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಇದೀಗ ಪಾವಗಡ ಪೊಲೀಸರು ಮಹಿಳೆ ಸೇರಿದಂತೆ ನಾಲ್ವರನ್ನ ಬಂಧಿಸಿದ್ದಾರೆ.