


ಡೈಲಿ ವಾರ್ತೆ: 15/ಮಾರ್ಚ್ /2025


ಪಡವಲಕಾಯಿಯ ಸೇವನೆಯಿಂದ ಅರೋಗ್ಯಕ್ಕೆ ಪ್ರಯೋಜನಗಳು, ಇಲ್ಲಿದೆ ಮಾಹಿತಿ

ಹಾವಿನಂತಿರುವ ಪಡವಲಕಾಯಿಯಲ್ಲಿದೆ ಈ ಎಲ್ಲಾ ರೋಗಗಳನ್ನು ಓಡಿಸೋ ತಾಕತ್ತು!
ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ನೀಡುವ ತರಕಾರಿಗಳ ಪಟ್ಟಿಯಲ್ಲಿ ಪಡವಲಕಾಯಿ ಕಾಯಿ ಕೂಡ ಒಂದು. ಆದರೆ ಎಷ್ಟೋ ಮಂದಿಗೆ ಪಡವಲಕಾಯಿ ಎಂದರೆ ಏನು ಎಂದೇ ತಿಳಿದಿಲ್ಲ. ನೋಡಲು ಹಾವಿನಂತೆ ಕಾಣುವ ಈ ಪಡವಲಕಾಯಿಯಲ್ಲಿ ನಾನಾ ಆರೋಗ್ಯ ಪ್ರಯೋಜನಗಳಿವೆ. ಹಾಗಾದ್ರೆ ಪಡವಲಕಾಯಿಯ ಸೇವನೆಯಿಂದ ಏನೆಲ್ಲಾ ಪ್ರಯೋಜನಗಳಿವೆ?
1.ಮಧುಮೇಹದ ಪ್ರಾಬಲ್ಯವನ್ನು ಕಡಿಮೆ ಮಾಡುತ್ತದೆ.
2.ಪಿತ್ತಜ್ವರ ಮತ್ತು ಮಲೇರಿಯಾವನ್ನು ಗುಣಪಡಿಸುತ್ತದೆ
3.ಕಾಮಾಲೆ ರೋಗವನ್ನು ಗುಣಪಡಿಸುತ್ತದೆ 4.ಹೃದಯದ ಆರೋಗ್ಯವನ್ನು ಉತ್ತಮಪಡಿಸುತ್ತದೆ. 5.ಮಲಬದ್ದತೆ ನಿವಾರಿಸುತ್ತದೆ. 6. ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ನೆರವಾಗುತ್ತದೆ.
7.ತಲೆಹೊಟ್ಟನ್ನು ನಿವಾರಿಸುತ್ತದೆ.
8.ದೇಹದ ಕಲ್ಮಶಗಳನ್ನು ನಿವಾರಿಸುತ್ತದೆ
9.ಹಲ್ಲು ಮತ್ತು ಮೂಳೆಗಳ ದೃಢತೆಯನ್ನು ಹೆಚ್ಚಿಸುತ್ತದೆ
10.ನೆತ್ತಿಗೆ ಎದುರಾಗುವ ರೋಗಗಳಿಂದ ಕಾಪಾಡುತ್ತದೆ.

ಮಧುಮೇಹದ ಪ್ರಾಬಲ್ಯವನ್ನು ಕಡಿಮೆ ಮಾಡುತ್ತದೆ:
ಟೈಪ್ 2 ಮಧುಮೇಹ, ಅಂದರೆ ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯಾದರೂ ಬಳಸಿಕೊಳ್ಳಲು ಅಸಮರ್ಥವಾಗುವ ಮಧುಮೇಹ ಇರುವ ವ್ಯಕ್ತಿಗಳಿಗೆ ಪಡವಲಕಾಯಿ ಅತ್ಯಂತ ಸೂಕ್ತವಾದ ಆಹಾರವಾಗಿದೆ. ಈ ಗುಣವನ್ನು ಪ್ರಾಯಶಃ ಚೀನೀಯರು ಮೊದಲಿಗೆ ಕಂಡುಕೊಂಡು ಮಧುಮೇಹದ ಚಿಕಿತ್ಸೆಗಾಗಿ ಬಳಸುತ್ತಿದ್ದರು. ಈ ತರಕಾರಿಯನ್ನು ಸೇವಿಸಿದ ಮಧುಮೇಹಿಗಳ ದೇಹ ಮಧುಮೇಹದ ಮೇಲೆ ಹೆಚ್ಚಿನ ನಿಯಂತ್ರಣ ಪಡೆಯಲು ಸಾಧ್ಯವಾಗುತ್ತದೆ. ಪಿತ್ತಜ್ವರ ಮತ್ತು ಮಲೇರಿಯಾವನ್ನು ಗುಣಪಡಿಸುತ್ತದೆ: ಒಂದು ವೇಳೆ ಪಿತ್ತಕೋಶದ ಸೋಂಕಿನಿಂದ ಎದುರಾದ ಪಿತ್ತಕೋಶ ಅಥವಾ ಸೊಳ್ಳೆಕಡಿತದಿಂದ ಎದುರಾದ ಮಲೇರಿಯಾ ಜ್ವರ, ಅಥವಾ ಅತಿಸಾರ, ವಾಕರಿಕೆ ಅಥವಾ ವಾಂತಿಯ ಲಕ್ಷಣ ಇರುವ ಯಾವುದೇ ಜ್ವರ ಆವರಿಸಿದರೆ ಪಡವಲಕಾಯಿಯನ್ನು ಕುದಿಸಿ ಸೋಸಿದ ನೀರನ್ನು ಕುಡಿಯುವ ಮೂಲಕ ಶೀಘ್ರವೇ ಜ್ವರ ಇಳಿಯುತ್ತದೆ. ಈ ನೀರಿನಲ್ಲಿ ಕೊಂಚ ಜೇನು ಮತ್ತು ‘ಚೈರೆಟ್ಟಾ'(chiretta)(ಕನ್ನಡದಲ್ಲಿ ನೆಲಬೇರು, ಸಸ್ಯನಾಮ ಎಂಬ ಮೂಲಿಕೆಯನ್ನು ಕುದಿಸಿ ಸೇವಿಸಿದರೆ ಪಿತ್ತಜ್ವರ ಇನ್ನೂ ಶೀಘ್ರವಾಗಿ ಗುಣಹೊಂದುತ್ತದೆ.
ಪಡವಲಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ನುಣ್ಣಗೆ ಅರೆದು ಹಿಂಡಿದ ರಸವನ್ನೂ ಸೇವಿಸುವ ಮೂಲಕ ಪಿತ್ತಜ್ವರ ಶೀಘ್ರವೇ ಕಡಿಮೆಯಾಗುತ್ತದೆ. ಅಲ್ಲದೇ ವಿಷವೂಟ ಸೇವಿಸಿ ವಾಕರಿಕೆಯಾಗುವ ಅನುಭವವಾಗುತ್ತಿದ್ದರೆ ತಕ್ಷಣವೇ ಈ ರಸವನ್ನು ಸೇವಿಸಿದರೆ ವಾಕರಿಕೆ ಇಲ್ಲವಾಗುತ್ತದೆ ಹಾಗೂ ಮಾರಣಾಂತಿಕ ಮಲೇರಿಯಾ ಜ್ವರವೂ ಕಡಿಮೆಯಾಗುತ್ತದೆ.
ಕಾಮಾಲೆ ರೋಗವನ್ನು ಗುಣಪಡಿಸುತ್ತದೆ:
ಕಾಮಾಲೆ ರೋಗಿಗಳು ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನೇ ಸೇವಿಸಬೇಕು. ಪಡವಲದ ಎಲೆಗಳನ್ನು ಕೊಬ್ಬಂಬರಿ ಬೀಜಗಳೊಂದಿಗೆ ಬೇಯಿಸಿ ಸೇವಿಸುವ ಮೂಲಕ ಕಾಮಾಲೆ ರೋಗ ಕ್ಷಿಪ್ರವಾಗಿ ಗುಣವಾಗುತ್ತದೆ. ಈ ವಿಧಾನವನ್ನು ದಿನಕ್ಕೆ ಮೂರು ಬಾರಿ ಅನುಸರಿಸಬೇಕು. ತನ್ಮೂಲಕ ದೇಹದಲ್ಲಿ ಉತ್ತಮ ಪ್ರಮಾಣದ ಪಿತ್ತರಸಗಳು ಸ್ರವಿಸಿ ಕಾಮಾಲೆಯನ್ನು ಶೀಘ್ರವಾಗಿ ಗುಣಪಡಿಸಲು ನೆರವಾಗುತ್ತದೆ.
ಹೃದಯದ ಆರೋಗ್ಯವನ್ನು ಉತ್ತಮಪಡಿಸುತ್ತದೆ: ಪಡವಲಕಾಯಿಯಿಂದ ಪ್ರತ್ಯೇಕಿಸಲ್ಪಟ್ಟ ಪೋಷಕಾಂಶಗಳಿಗೆ ಹೃದಯದ ಆರೋಗ್ಯವನ್ನು ಬಾಧಿಸುವ ತೊಂದರೆಗಳನ್ನು ನಿಗ್ರಹಿಸುವ ಗುಣವಿದೆ. ಉದಾಹರಣೆಗೆ ತೀವ್ರಗೊಳ್ಳುವ ಹೃದಯದ ಬಡಿತ ಕಡಿಮೆಗೊಳಿಸುತ್ತದೆ ಹಾಗೂ ನರಗಳನ್ನು ಸಡಿಲಿಸುವ ಮೂಲಕ ಅಗತ್ಯವಿರುವ ಒತ್ತಡವನ್ನು ಕಡಿಮೆಗೊಳಿಸುತ್ತದೆ. ಪಡವಲಕಾಯಿಯಿಂದ ಪ್ರತ್ಯೇಕಿಸಲ್ಪಟ್ಟ ಪೋಷಕಾಂಶಗಳನ್ನು ಸೇವಿಸುವ ಮೂಲಕ ಮಾನಸಿಕ ಒತ್ತಡ ಮತ್ತು ಹೃದಯಕ್ಕೆ ಸಂಬಂಧಿಸಿದ ತೊಂದರೆಗಳು ಇಲ್ಲವಾಗುತ್ತವೆ. ಆರೋಗ್ಯ ತಜ್ಞರ ಪ್ರಕಾರ, ನಿತ್ಯವೂ ಪಡವಲಕಾಯಿಯ ರಸವನ್ನು ಎರಡು ಕಪ್ ನಷ್ಟು ಸೇವಿಸುತ್ತಾ ಬಂದರೆ ಹೃದಯಕ್ಕೆ ಸಂಬಂಧಿಸಿದ ಹೆಚ್ಚಿನ ಎಲ್ಲಾ ತೊಂದರೆಗಳು ಇಲ್ಲವಾಗುತ್ತವೆ.
ಮಲಬದ್ದತೆ ನಿವಾರಿಸುತ್ತದೆ: ನೀರಿನ ಕೊರತೆ ಹಾಗೂ ಆಹಾರದಲ್ಲಿ ಸಾಕಷ್ಟು ಕರಗುವ ಮತ್ತು ಕರಗದ ನಾರು ಇರದೇ ಇದ್ದರೆ ಹಾಗೂ ಸಾಕಷ್ಟು ವ್ಯಾಯಾಮವನ್ನೂ ಮಾಡದೇ ಇದ್ದರೆ ಮಲಬದ್ದತೆ ಸುಲಭವಾಗಿ ಆವರಿಸುತ್ತದೆ. ಕೆಲವೊಮ್ಮೆ ಮಲಬದ್ದತೆ ಇತರ ರೋಗದ ಲಕ್ಷಣವೂ ಆಗಿರಬಹುದು. ಉದಾಹರಣೆಗೆ ಪಾರ್ಕಿನ್ಸನ್ ಕಾಯಿಲೆ, ಮಧುಮೇಹ, ಹೊಟ್ಟೆಯುರಿ ಇತ್ಯಾದಿ. ಮಲಬದ್ದತೆಯನ್ನು ನಿವಾರಿಸಲು ಪಡವಲ ಕಾಯಿ ಅತ್ಯುತ್ತಮ ಆಯ್ಕೆಯಾಗಿದೆ. ಇದಕ್ಕಾಗಿ ನಿತ್ಯವೂ ಒಂದರಿಂದ ಎರಡು ದೊಡ್ಡ ಚಮಚದಷ್ಟು ತಾಜಾ ಪಡವಲಕಾಯಿಯ ರಸವನ್ನು ಹಿಂಡಿ ಮುಂಜಾನೆ ಸೇವಿಸಬೇಕು. ಅಲ್ಲದೇ ತರಕಾರಿಯ ರೂಪದಲ್ಲಿ ಸೇವಿಸುವ ಮೂಲಕವೂ ಇದರ ಪೋಷಕಾಂಶಗಳು ಅಲ್ಪಪ್ರಾಬಲ್ಯದ ವಿರೇಚಕದಂತೆ ಕಾರ್ಯನಿರ್ವಹಿಸುತ್ತವೆ. ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ನೆರವಾಗುತ್ತದೆ ಪಡವಲಕಾಯಿಯಲ್ಲಿ ಅತಿ ಕಡಿಮೆ ಕ್ಯಾಲೋರಿಗಳಿವೆ ಹಾಗೂ ಕೊಬ್ಬು ಇಲ್ಲವೇ ಇಲ್ಲ. ಅಲ್ಲದೇ ಕರಗುವ ಮತ್ತು ಕರಗದ ನಾರಿನ ಜೊತೆಗೇ ನೀರಿನಂಶವೂ ಹೆಚ್ಚಾಗಿದ್ದು ಉಳಿದ ಪೋಷಕಾಂಶಗಳೂ ಉತ್ತಮ ಪ್ರಮಾಣದಲ್ಲಿವೆ. ತೂಕ ಇಳಿಸಿಕೊಳ್ಳಬಯಸುವವರಿಗೆ ಇದೊಂದು ಹೇಳಿ ಮಾಡಿಸಿದಂತಹ ಆಹಾರವಾಗಿದ್ದು ತೂಕ ಇಳಿಸುವ ಪ್ರಯತ್ನಗಳಿಗೆ ಹೆಚ್ಚಿನ ನೆರವು ದೊರಕುತ್ತದೆ.
ತಲೆಹೊಟ್ಟನ್ನು ನಿವಾರಿಸುತ್ತದೆ: ಒಂದು ವೇಳೆ ನೀವು ತಲೆಹೊಟ್ಟೆನ ತೊಂದರೆಯಿಂದ ಪೀಡೆಗೊಳಗಾಗಿದ್ದರೆ ಇದನ್ನು ನಿವಾರಿಸಲು ಪಡವಲಕಾಯಿಯ ರಸವನ್ನು ತಲೆಹೊಟ್ಟಿರುವ ಭಾಗದ ಮೇಲೆ ನಯವಾಗಿ ಸವರಿಕೊಂಡರೆ ಸಾಕು, ಅಷ್ಟು ಸುಲಭವಾಗಿ ತಲೆಹೊಟ್ಟನ್ನು ನಿವಾರಿಸಬಹುದು. ಈ ರಸದಲ್ಲಿ ತಲೆಹೊಟ್ಟನ್ನು ನಿವಾರಿಸಿ ತಲೆಗೂದಲ ಬುಡಕ್ಕೆ ಹೆಚ್ಚಿನ ಪೋಷಕಾಂಶಗಳನ್ನು ಒದಗಿಸಿ ನೆತ್ತಿಯ ಚರ್ಮ ಒಣಗದಂತೆ ತಡೆಯುತ್ತದೆ ಹಾಗೂ ಈ ಮೂಲಕ ಮತ್ತೆ ತಲೆಹೊಟ್ಟಾಗದಂತೆ ಕಾಪಾಡುತ್ತದೆ. ಇದಕ್ಕಾಗಿ ತಲೆಗೂದಲು ತೋಯುವಷ್ಟು ಪಡವಲದ ರಸವನ್ನು ಸಂಗ್ರಹಿಸಿ ತಲೆಗೂದಲ ಬುಡಕ್ಕೆ ಹೆಚ್ಚು ತಾಕುವಂತೆ ರಸವನ್ನು ಹಚ್ಚಿಕೊಂಡು ಹಾಗೇ ಒಣಗಲು ಬಿಡಬೇಕು. ಅರ್ಧ ಘಂಟೆಯ ಬಳಿಕ ತಣ್ಣೀರಿನಲ್ಲಿ ತೊಳೆದುಕೊಂಡರೆ ಅತ್ಯುತ್ತಮ ಪರಿಣಾಮವನ್ನು ನಿರೀಕ್ಷಿಸಬಹುದು. ಇದು ಅತ್ಯಂತ ಸುರಕ್ಷಿತವಾಗಿದ್ದು ಹಾನಿಕಾರಕ ಮತ್ತು ಪ್ರಬಲ ರಾಸಾಯನಿಕಗಳಿಂದ ಕೂಡಿದ ದುಬಾರಿ ಪ್ರಸಾದನಗಳನ್ನು ಕೊಳ್ಳುವುದೂ ತಪ್ಪುತ್ತದೆ, ಇದರಿಂದ ಕೂದಲು ಹಾನಿಗೊಳಗಾಗುವುದೂ ತಪ್ಪುತ್ತದೆ.
ದೇಹದ ಕಲ್ಮಶಗಳನ್ನು ನಿವಾರಿಸುತ್ತದೆ: ನಮ್ಮ ದೇಹವನ್ನು ಆಗಾಗ ಒಳಗಿನಿಂದ ಪೂರ್ಣವಾಗಿ ಕಲ್ಮಶಮುಕ್ತವಾಗಿಸುತ್ತಾ ಇರಬೇಕು. ಇದನ್ನೇ ಉಪವಾಸದ ಮೂಲಕ ನಮ್ಮ ಹಿರಿಯರು ಅನುಸರಿಸುತ್ತಿದ್ದರು. ದೇಹದ ಕಲ್ಮಶಗಳನ್ನು ಪೂರ್ಣವಾಗಿ ನಿವಾರಿಸಿ ಸ್ವಚ್ಛಗೊಳಿಸುವ ಮೂಲಕ ದೇಹದ ಎಲ್ಲಾ ಅಂಗಗಳು ಪುನಃಶ್ಚೇತನ ಪಡೆದು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಪಡವಲಕಾಯಿ ಅತ್ಯುತ್ತಮ ಮೂತ್ರವರ್ಧಕವಾಗಿದ್ದು ದೇಹದಿಂದ ಕಲ್ಮಶಗಳನ್ನು ನಿವಾರಿಸಲು ನೆರವಾಗುವ ಜೊತೆಗೇ ಯಕೃತ್ ನ ಕ್ಷಮತೆಯನ್ನೂ ಹೆಚ್ಚಿಸುತ್ತದೆ.
ಹಲ್ಲು ಮತ್ತು ಮೂಳೆಗಳ ದೃಢತೆಯನ್ನು ಹೆಚ್ಚಿಸುತ್ತದೆ:
ಈ ತರಕಾರಿ ಅತಿ ಮೃದುವಾಗಿದ್ದರೂ ಇದರಲ್ಲಿರುವ ಕ್ಯಾಲ್ಸಿಯಂ ಮೂಳೆ ಮತ್ತು ಹಲ್ಲುಗಳನ್ನು ದೃಢಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿಂದ ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬುವ ಓಸ್ಟಿಯೋಪೋರೋಸಿಸಿ, ಓಸ್ಟಿಯೋಪೀನಿಯಾ ಹಾಗೂ ಹೈಪೋಕ್ಯಾಲ್ಸೀಮಿಯಾ ಮೊದಲಾದ ತೊಂದರೆಗಳು ಎದುರಾಗುತ್ತವೆ.
ಮೂಳೆ ಮತ್ತು ಹಲ್ಲುಗಳ ದೃಢತೆಗೆ ದೇಹದಲ್ಲಿ ಸತತವಾದ ಕ್ಯಾಲ್ಸಿಯಂ ಪೂರೈಕೆಯ ಅಗತ್ಯವಿದೆ ಹಾಗೂ ವಿಶೇಷವಾಗಿ ವಯಸ್ಸು ಹೆಚ್ಚಾದಂತೆ ಕ್ಯಾಲ್ಸಿಯಂ ಕೊರತೆಯೂ ಹೆಚ್ಚುತ್ತಾ ಹೋಗುತ್ತದೆ. ಪಡವಲ ಈ ಕೊರತೆಯನ್ನು ಸಮರ್ಥವಾಗಿ ತುಂಬುತ್ತದೆ. ನೆತ್ತಿಗೆ ಎದುರಾಗುವ ರೋಗಗಳಿಂದ ಕಾಪಾಡುತ್ತದೆ ನೆತ್ತಿ ಅಥವಾ ನಮ್ಮ ತಲೆಯ ಮೇಲ್ಭಾಗದ ಚರ್ಮ ಇತರ ಚರ್ಮಕ್ಕೂ ವಿಶಿಷ್ಟವಾಗಿದೆ ಹಾಗೂ ದೇಹದ ಗರಿಷ್ಟ ಕೂದಲ ಬುಡಗಳು ಇಲ್ಲಿರುತ್ತವೆ. ಅತಿಯಾದ ಮಾನಸಿಕ ಒತ್ತಡ ಅಥವಾ ರೋಗ ನಿರೋಧಕ ಶಕ್ತಿ ಕುಂಠಿತವಾಗುವುದು ಈ ಚರ್ಮವನ್ನು ಶಿಥಿಲಗೊಳಿಸಬಹುದು ಹಾಗೂ ಕೂದಲ ಬುಡಗಳು ಸಡಿಲಗೊಳ್ಳಬಹುದು. ಪರಿಣಾಮವಾಗಿ ತಲೆಗೂದಲು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಉದುರಬಹುದು. ಕೂದಲು ಸುಲಭವಾಗಿ ಉದುರುತ್ತಿದ್ದರೆ ಈ ಭಾಗದಲ್ಲಿ ತಾಜಾ ಪಡವಲಕಾಯಿಯಿಂದ ಹಿಂಡಿ ತೆಗೆದ ರಸವನ್ನು ಹಚ್ಚಿಕೊಳ್ಳುವ ಮೂಲಕ ನೆತ್ತಿಯ ಚರ್ಮ ನೈಸರ್ಗಿಕ ಆರೈಕೆ ಪಡೆಯುತ್ತದೆ ಹಾಗೂ ನೆತ್ತಿಯ ತೊಂದರೆಗಳು ಇಲ್ಲವಾಗುತ್ತವೆ.
ಪಡವಲಕಾಯಿಯ ಸೇವನೆಯ ಬಗ್ಗೆ ಎಚ್ಚರಿಕೆ : ಗರ್ಭಿಣಿಯರು ಹಾಗೂ ಹಾಲೂಡಿಸುತ್ತಿರುವ ಬಾಣಂತಿಯರು ಪಡವಲಕಾಯಿಯನ್ನು ಮಿತಪ್ರಮಾಣದಲ್ಲಿ ಮಾತ್ರವೇ ಸೇವಿಸಬೇಕು. ಇವರಿಗೆ ಹೆಚ್ಚಿನ ಪೌಷ್ಟಿಕ ಆಹಾರದ ಅಗತ್ಯವಿದ್ದು ಕಡಿಮೆ ಕ್ಯಾಲೋರಿ ಇರುವ ಆಹಾರವಾದ ಪಡವಲದ ಸೇವನೆಯನ್ನೇ ಪ್ರಮುಖ ಆಹಾರವಾಗಿ ಸೇವಿಸಿದರೆ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಗರ್ಭಿಣಿ ಮತ್ತು ಮಗುವಿನ ಅಗತ್ಯಕ್ಕೆ ಸಾಕಾಗದೇ ಹೋಗಬಹುದು. ಉಳಿದಂತೆ ಎಲ್ಲಾ ವಯಸ್ಸಿನ ವ್ಯಕ್ತಿಗಳಿಗೆ ಪಡವಲಕಾಯಿ ಉತ್ತಮವಾದ ಆಹಾರವಾಗಿದೆ.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳ ಮಾಹಿತಿಯನ್ನು ಆಧರಿಸಿದೆ. ಡೈಲಿ ವಾರ್ತೆ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.