


ಡೈಲಿ ವಾರ್ತೆ: 18/ಮಾರ್ಚ್ /2025


ಉಳ್ಳಾಲ: ಕಾಡುಹಂದಿ ಅಡ್ಡ ಬಂದು ಸ್ಕೂಟರ್ ಪಲ್ಟಿ, ವೃದ್ಧೆ ಸಾವು

ಉಳ್ಳಾಲ: ಚಲಿಸುತಿದ್ದ ಸ್ಕೂಟರ್‌ಗೆ ಏಕಾಏಕಿ ಅಡ್ಡ ಬಂದ ಕಾಡುಹಂದಿಗೆ ಡಿಕ್ಕಿಹೊಡೆದ ಪರಿಣಾಮ ರಸ್ತೆಗೆಸೆಯಲ್ಪಟ್ಟ ವೃದ್ಧೆಯೋರ್ವರು ಮೃತ ಪಟ್ಟ ಘಟನೆ ಹರೇಕಳ ಗ್ರಾಮದ ಖಂಡಿಗ ಎಂಬಲ್ಲಿ ನಡೆದಿದೆ.
ಹರೇಕಳ ಗ್ರಾಮದ ಪೊಲ್ಕೆ ಮೇಗಿನಮನೆ ನಿವಾಸಿ ದೇವಕಿ ಮಾಣೈ(72) ಮೃತಪಟ್ಟ ಮಹಿಳೆ.
ವರದರಾಜ್ ಮಾಣೈ ಅವರು ತನ್ನ ತಾಯಿ ದೇವಕಿ ಮಾಣೈಯವರೊಂದಿಗೆ ಸ್ಕೂಟರ್‌ನಲ್ಲಿ ಬಜಾಲಿನ ಸಂಬಂಧಿಕರ ಮನೆಗೆ ಹೋಗಿದ್ದರು. ಅಲ್ಲಿಂದ ಅಡ್ಯಾರು-ಪಾವೂರು ಮಾರ್ಗವಾಗಿ ಹರೇಕಳದ ಮನೆಗೆ ಮರಳುತ್ತಿದ್ದ ವೇಳೆ ದಾರಿ ಮಧ್ಯದ ಖಂಡಿಗ ಎಂಬಲ್ಲಿನ ಗುಡ್ಡಕಾಡು ಪ್ರದೇಶದಿಂದ ಕಾಡು ಹಂದಿಯೊಂದು ದಿಢೀರನೆ ರಸ್ತೆ ಕಡೆ ಧಾವಿಸಿ ಬಂದಿದೆ.
ಈ ವೇಳೆ ಸ್ಕೂಟರ್ ಚಲಾಯಿಸುತ್ತಿದ್ದ ವರದರಾಜ್ ಅವರು ವಿಚಲಿತರಾಗಿ ಹಠತ್ತನೆ ಬ್ರೇಕ್ ಹಾಕಿದ್ದಾರೆ. ಪರಿಣಾಮ ಸ್ಕೂಟರ್‌ನಲ್ಲಿದ್ದ ತಾಯಿ ಮತ್ತು ಪುತ್ರ ರಸ್ತೆಗೆಸೆಯಲ್ಪಟ್ಟಿದ್ದಾರೆ.
ಗಂಭೀರವಾಗಿ ಗಾಯಗೊಂಡ ದೇವಕಿಯವರಿಗೆ ಹರೇಕಳದ ಕ್ಲಿನಿಕ್ ಒಂದರಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮೃತ ದೇವಕಿಯವರ ಪತಿ ಭೋಜ ಮಾಣೈ ಅವರು ಆರು ತಿಂಗಳ ಹಿಂದಷ್ಟೇ ಅಲ್ಪ ಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದರು.
ಈ ಬಗ್ಗೆ ಮಂಗಳೂರು ದಕ್ಷಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.