


ಡೈಲಿ ವಾರ್ತೆ: 02/ಏಪ್ರಿಲ್ /2025


ಬ್ರಹ್ಮಾವರ| ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ವಿರುದ್ಧ ಸಾರ್ವಜನಿಕರಿಂದ ಬೃಹತ್ ಪ್ರತಿಭಟನೆ: ಫ್ಲೈ ಓವರ್, ಸರ್ವಿಸ್ ರಸ್ತೆಗೆ ಆಗ್ರಹ: ವಾರದೊಳಗೆ ಸರ್ವಿಸ್ ರಸ್ತೆಯ ಕಾಮಗಾರಿ ಪ್ರಾರಂಭವಾಗದಿದ್ದಲ್ಲಿ ಬ್ರಹ್ಮಾವರ ಬಂದ್ ಗೆ ಕರೆ

ಬ್ರಹ್ಮಾವರ:ರಾಷ್ಟ್ರೀಯ ಹೆದ್ದಾರಿ 66ರ ಇಲ್ಲಿನ
ಬ್ರಹ್ಮಾವರದ ಮಹೇಶ್ ಆಸ್ಪತ್ರೆ ಸಮೀಪ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದಾಗಿ ಪದೇ ಪದೇ ಅಪಘಾತಗಳು ಸಂಭವಿಸಿ ಸಾವು ನೋವುಗಳಾಗುತ್ತಿದ್ದು, ಹಾಗಾಗಿ ಸಮರ್ಪಕ ಸರ್ವಿಸ್ ರಸ್ತೆ ಮತ್ತು ಫ್ಲೈ ಓವರ್ ನಿರ್ಮಾಣಕ್ಕೆ ಆಗ್ರಹಿಸಿ ಬುಧವಾರ ಬ್ರಹ್ಮಾವರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಮಂಗಳವಾರ ಮಹೇಶ್ ಆಸ್ಪತ್ರೆ ಎದುರುಗಡೆ ನಡೆದ ಭೀಕರ ಅಪಘಾತದಲ್ಲಿ ವಿದ್ಯಾರ್ಥಿ ಸ್ಥಳದಲ್ಲೇ ಮೃತಗೊಂಡಿದ್ದು, ಈ ಬಗ್ಗೆ ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಇಲ್ಲಿ ಹಲವು ಬಾರಿ ಅಪಘಾತಗಳು ನಡೆದಿದ್ದು, ಇದರ ಬಗ್ಗೆ ಹಲವಾರು ಬಾರಿ ಸಾರ್ವಜನಿಕರಿಂದ, ವಿವಿಧ ಸಂಘಟನೆಗಳ ಮನವಿಯಿಂದ, ಪತ್ರಿಕಾ ವರದಿಗಳಿಂದ ಎಚ್ಚೆತ್ತುಕೊಳ್ಳದೆ ಜಿಲ್ಲಾಡಳಿತ ಕಣ್ಣುಮುಚ್ಚಿ ಕುಳಿತಿದೆ ಎಂಬುದು ಸಾರ್ವಜನಿಕರ ಆಗ್ರಹ.


ಬ್ರಹ್ಮಾವರ ಎಸ್.ಎಮ್.ಎಸ್ ಕಾಲೇಜು ಬಳಿಯಿಂದ ತಾಲೂಕು ಅಡಳಿತ ಸೌಧದ ತನಕ ಶಾಂತಿಯುತ ಜಾಥಾ ನಡೆಯಿತು. ನಂತರ ತಾಲೂಕು ಕಛೇರಿ ಎದುರು ಬೃಹತ್ ಪ್ರತಿಭಟನೆ ನಡೆಯಿತು.
ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಬಿರ್ತಿ ಮಾತನಾಡಿ, ಅಧಿಕಾರಿಗಳು ಇಂತಹ ಸಮಸ್ಯೆಗಳ ಬಗ್ಗೆ ಗಮನಹರಿಸದೇ ರಾಜಕೀಯ ಪಕ್ಷದವರನ್ನು ಒಡೆದು ಆಳುವ ನೀತಿಯನ್ನು ಅನುಸರಿಸಿ ನೆಮ್ಮದಿಯ ಜೀವನ ಸಾಗಿಸುತಿದ್ದಾರೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಸೌಜನ್ಯ ಕೂಡ ಇಲ್ಲ. ಇದು ಆರಂಭ ಅಷ್ಟೇ ಶೀಘ್ರವಾಗಿ ಇದಕ್ಕೊಂದು ಪರಿಹಾರ ನೀಡದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರರ್ತಕರ್ತ ವಸಂತ ಗಿಳಿಯಾರ್ ಮಾತನಾಡಿ, ಬರೆ ಘೋಷಣೆಗಳಿಂದ ನ್ಯಾಯ ದೊರಕುವುದಿಲ್ಲ, ಸರ್ವರು ಒಗ್ಗಟ್ಟಾಗಿ ಇದರ ಬಗ್ಗೆ ಉಗ್ರ ಹೋರಾಟ ಮಾಡಬೇಕಾಗಿದೆ. ವಾರದ ಒಳಗೆ ಅಧಿಕಾರಿಗಳು, ಜಿಲ್ಲಾಧಿಕಾರಿ, ಸಂಸದರು, ಶಾಸಕರು ಸಭೆ ನಡೆಸಿ ತೀರ್ಮಾನಕ್ಕೆ ಬಂದು, ಶೀಘ್ರದಲ್ಲಿ ಸಮಸ್ಯೆಯನ್ನು ಪರಿಹರಿಸಲು ಸ್ಪಂದಿಸದಿದ್ದರೆ ಎಪ್ರಿಲ್ 12 ರಂದು ಬ್ರಹ್ಮಾವರ ಬಂದ್ ಮಾಡಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಆಗ್ರಹಿಸಿದರು.

ಸೈಂಟ್ ಸೀರಿಯನ್ ಚರ್ಚ್ ಧರ್ಮಗುರುಗಳಾದ ಫಾದರ್ ಮಥಾಯ್ ಮಾತನಾಡಿ, ಅರ್ವಯಜ್ಞಾನಿಕ ರಸೆಯ ವ್ಯವಸ್ಥೆಯಿಂದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತುಂಬಾ ಕಷ್ಟವಾಗುತ್ತಿದೆ. ತಕ್ಷಣ ಸಮಸ್ಯೆ ಪರಿಹರಿಸುವಲ್ಲಿ ಸಹಕರಿಸಿ ಎಂದು ಮನವಿ ಮಾಡಿದರು.

ಯುವ ಶಕ್ತಿ ಜಾಗೃತರಾಗಿ ಸಂಘಟಿತರಾಗಬೇಕು, ಮತ್ತು ಈ ಹೋರಾಟದಲ್ಲಿ ನ್ಯಾಯ ಸಿಗುವಲ್ಲಿ ಶ್ರಮಿಸಬೇಕು ಎಂದು, ಎಸ್.ಎಮ್.ಎಸ್ ಕಾಲೇಜಿನ ಪ್ರಿನ್ಸಿಪಾಲ್ ರಾಬರ್ಟ್ ಹೇಳಿದರು. ಎಸ್.ಎಮ್.ಎಸ್ ಇಂಗ್ಲೀಷ್ ಮೀಡಿಯಮ್ ಪ್ರಿನ್ಸಿಪಾಲ್ ಅಭಿಲಾಷ ಹಂದೆ ಮಾತನಾಡಿ,ವೈಜ್ಞಾನಿಕವಾಗಿ ಹೆದ್ದಾರಿ ಮತ್ತು ಸರ್ವೀಸ್ ರಸ್ತೆಗಳು ಮುಖ್ಯವಾಗಿ ಆಗಬೇಕಿದೆ ಎಂದರು.

ನಂತರ ಬ್ರಹ್ಮಾವರ ತಾಲೂಕು ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ ಶಿಕ್ಷಣ ಸಂಸ್ಥೆ ಮತ್ತು ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರು ನೀಡಿದ ಮನವಿ ಸ್ವೀಕರಿಸಿ, ಮಾತನಾಡಿ, ಈಗಾಗಲೇ ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿದ್ದು, ತಕ್ಷಣವೇ ಸರ್ವೀಸ್ ರಸ್ತೆ ಮಾಡುವಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದರು. ಈ ಸಂದರ್ಭದಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ್, ಅಮ್ಮುಂಜೆ ಚರ್ಚ್ ಧರ್ಮಗುರು, ಫಾಧರ್ ಡೇವಿಡ್ ಕ್ರಾಸ್ತಾ ಸಮಾಜ ಸೇವಕ ಆಲ್ವಿನ್ ಅಂದ್ರಾದೆ,
ಚರ್ಚ್‌ನ ಧರ್ಮಗುರುಗಳು, ಬ್ರಹ್ಮಾವರದ ವಿವಿಧ ಶಿಕ್ಷಣ ಸಂಸ್ಥೆಗಳ ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು, ಹಾಗೂ ಹಿರಿಯ ನಾಗರಿಕರ ವೇದಿಕೆ, ರೋಟರಿ, ಲಯನ್ಸ್ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಸಂಘಟನೆಗಳು ಮತ್ತು ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.