


ಡೈಲಿ ವಾರ್ತೆ: 02/ಏಪ್ರಿಲ್ /2025


ಹಿಂಸಾತ್ಮಕವಾಗಿ ಅಕ್ರಮ ಗೋ ಸಾಗಾಟ ಪ್ರಕರಣ: ಐವರು ಆರೋಪಿಗಳ ಬಂಧನ

ಮಂಗಳೂರು :20ಕ್ಕೂ ಹೆಚ್ಚು ಗೋವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಪಿಕಪ್ ವಾಹನದಲ್ಲಿ ತುಂಬಿಸಿ ಕಸಾಯಿಖಾನೆಗೆ ಒಯ್ಯುತ್ತಿದ್ದಾಗ ಬಜರಂಗದಳ ಕಾರ್ಯಕರ್ತರು ತಡೆದು ನಿಲ್ಲಿಸಿದ ಪ್ರಕರಣದಲ್ಲಿ ಬಜ್ಪೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಳ್ತಂಗಡಿಯ ಮಹಮ್ಮದ್ ತೌಸಿಫ್ (26), ಫಾರಿಸ್ ಸಲಾಂ(26), ತೋಕೂರಿನ ಅರಾಫತ್ ಆಲಿ (36), ಮಹಮ್ಮದ್ ಅಫ್ರೀದ್ (31), ಮೂಡುಬಿದ್ರೆಯ ಅಬ್ದುಲ್ ನಜೀರ್ (31) ಬಂಧಿತರು.
ಇವರು ಮಾರ್ಚ್ 28ರಂದು ಗೋವುಗಳನ್ನು ಸಾಗಿಸುತ್ತಿದ್ದಾಗ ಬಜರಂಗದಳ ಕಾರ್ಯಕರ್ತರು ಸೂರಲ್ಪಾಡಿ ಮಸೀದಿ ಮುಂಭಾಗದಲ್ಲಿ ಅಡ್ಡಹಾಕಿದ್ದರು. ಈ ವೇಳೆ ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದರು.
ಇದೇ ವೇಳೆ, ಪಿಕಪ್ ವಾಹನಕ್ಕೆ ಹಿಂಭಾಗದಲ್ಲಿ ಬೆಂಗಾವಲಾಗಿ ಬೊಲೆರೋ ವಾಹನದಲ್ಲಿದ್ದವರು ಬಜರಂಗದಳ ಕಾರ್ಯಕರ್ತರಿಗೆ ಗನ್ ತೋರಿಸಿ ಬೆದರಿಸಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಆದರೆ ಈ ಬಗ್ಗೆ ಪರಿಶೀಲನೆ ನಡೆಸಿದ ಪೊಲೀಸರು ಅದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ಆರೋಪ ತಳ್ಳಿಹಾಕಿದ್ದಾರೆ.
ಘಟನೆಯಲ್ಲಿ 19 ಗೋವುಗಳನ್ನು ಬಜರಂಗದಳ ಕಾರ್ಯಕರ್ತರು ರಕ್ಷಣೆ ಮಾಡಿದ್ದರು. ಗೋವಿನ ಕೈಕಾಲುಗಳನ್ನು ಮೇಲಕ್ಕೆ ನೇತಾಡಿಸಿದ ಕಟ್ಟಿದ್ದು, ಕಿರಿದಾದ ಜಾಗದಲ್ಲಿ ಕಟ್ಟಿಕೊಂಡು ಬರುತ್ತಿದ್ದಾಗಲೇ ತಡೆದು ನಿಲ್ಲಿಸಲಾಗಿತ್ತು.