


ಡೈಲಿ ವಾರ್ತೆ: 05/ಏಪ್ರಿಲ್ /2025


ಏ. 7 ರಂದು ಉಳ್ಳೂರು ಕೊರಗ ಕುಟುಂಬಗಳಿಗೆ ಸೂರು ನಿರ್ಮಾಣಕ್ಕೆ ಭೂಮಿ ಪೂಜೆ ಮತ್ತು ಶಿಲಾನ್ಯಾಸ
ಕುಂದಾಪುರ : ಹೆಗ್ಗುಂಜಿ ರಾಜೀವ ಶೆಟ್ಟಿ ಚಾರಿ ಟೇಬಲ್ ಟ್ರಸ್ಟ್ ಬೆಂಗಳೂರು ಇದರ ವತಿಯಿಂದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಉಳ್ಳೂರಿನ ಕೊರಗ ಕಾಲೋನಿ ದಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ಕೊರಗ ಕುಟುಂಬಗಳಿಗೆ 14 ಮನೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಎಚ್. ಆರ್. ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷರಾದ ನಾಗರಾಜ್ ಶೆಟ್ಟಿ ಹೇಳಿದರು.
ಅವರು ಏ. 5 ರಂದು ಕುಂದಾಪುರ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಎಚ್. ಆರ್. ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ವತಿಯಿಂದ ಹಿಂದುಳಿದ ಕೊರಗ ಸಮುದಾಯಕ್ಕೆ ಉಡುಪಿ ಜಿಲ್ಲೆಯಲ್ಲಿ 100 ಮನೆಗಳನ್ನು ನಿರ್ಮಿಸುವ ಅಭಿಯಾನವನ್ನು ಪ್ರಾರಂಭಿಸಿದ್ದರು.
2 ಕೋಟಿ ಹೆಚ್ಚು ವೆಚ್ಚದಲ್ಲಿ 14 ಮನೆಗಳ ಮೊದಲನೇ ಹಂತವನ್ನು 2024 ನವಂಬರ್ ನಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಜನ್ನಾಡಿ ಕೊರಗ ಕೇರಿಯ ಪ್ರದೇಶದಲ್ಲಿ ಪೂರ್ಣಗೊಳಿಸಿ ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರ ಸಮ್ಮುಖದಲ್ಲಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.
ಅದರ ಮುಂದಿನ ಹಂತವಾಗಿ 14 ಮನೆಗಳ ಶಿಲಾನ್ಯಾಸ ಸಮಾರಂಭವು ಏಪ್ರಿಲ್ 7 ರಂದು ಸೋಮವಾರ ಬೆಳಿಗ್ಗೆ 10:30ಕ್ಕೆ ಕುಂದಾಪುರ ತಾಲೂಕಿನ ಉಳ್ಳೂರು 74 ಗ್ರಾಮ ಕೊರಗರ ಕಾಲೋನಿಯದಲ್ಲಿ ನಡೆಯಲಿದೆ.
ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರ ಸಮ್ಮುಖದಲ್ಲಿ ಭೂಮಿ ಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಸಮಾಜ ಕಲ್ಯಾಣ ಸಚಿವರಾದ ಮಾನ್ಯ ಹೆಚ್. ಸಿ. ಮಹದೇವಪ್ಪ ಅವರು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರದ ಅಧ್ಯಕ್ಷತೆಯನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ ವೈ ರಾಘವೇಂದ್ರ ವಹಿಸಲಿದ್ದಾರೆ.
ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಶುಭ ಸಂದೇಶ ನೀಡಲಿದ್ದಾರೆ. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಪ್ರಾಸ್ತವಿಕ ನುಡಿಯನ್ನಾಡಲಿದ್ದಾರೆ. ಅಲ್ಲದೆ ಹಲವಾರು ರಾಜಕೀಯ ಮುಖಂಡರು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದು. ಸುಮಾರು 2000ಕ್ಕೂ ಹೆಚ್ಚು ಊರಿನ ಜನರು ಭಾಗವಹಿಸಲಿದ್ದಾರೆ ಎಂದು ನಾಗರಾಜ್ ಶೆಟ್ಟಿ ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ದಿಲೀಪ್ ಶೆಟ್ಟಿ, ರಾಜಗೋಪಾಲ್ ಹೆಗ್ಡೆ, ಉಳ್ಳೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಅಮಾಸೆಬೈಲು ಗ್ರಾಮ ಪಂಚಾಯತ್ ಸದಸ್ಯ ಕೃಷ್ಣ ಪೂಜಾರಿ ಉಪಸ್ಥಿತರಿದ್ದರು.