ಡೈಲಿ ವಾರ್ತೆ: 06/ಏಪ್ರಿಲ್ /2025

ಬ್ರಹ್ಮಾವರ: ಫ್ಲೈ ಓವರ್, ಅಂಡರ್ ಪಾಸ್ ರಚನೆ ಬಗ್ಗೆ ತಾಂತ್ರಿಕ ಸಮಿತಿ ವರದಿಯಂತೆ ಕ್ರಮ: ಉಡುಪಿ ಜಿಲ್ಲಾಧಿಕಾರಿ

ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪ್ಲೈಓವರ್ ಅಥವಾ ಅಂಡರ್ ಪಾಸ್ ನಿರ್ಮಿಸುವ ಕುರಿತು ತಾಂತ್ರಿಕ ಸಮಿತಿ ನೀಡುವ ವರದಿಯಂತೆ ಕ್ರಮ ಜರಗಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ತಿಳಿಸಿದ್ದಾರೆ.

ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇತ್ತೀಚೆಗೆ ನಡೆದ ಅಪಘಾತದಲ್ಲಿ ಶಾಲಾ ವಿದ್ಯಾರ್ಥಿ ಮೃತಪಟ್ಟಿರುವುದು ವಿಷಾದದ ಸಂಗತಿಯಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ರೀತಿಯ ಘಟನೆ ಪದೇ ಪದೇ ಆಗುತ್ತಿದೆ. ಈಗಾಗಲೇ ಈ ಕುರಿತು ಪರಿಶೀಲಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪೋಲಿಸ್, ಲೋಕೋಪಯೋಗಿ, ಕಂದಾಯ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ತಾಂತ್ರಿಕ ಸಮಿತಿಯನ್ನು ರಚಿಸಲಾಗಿದೆ ಎಂದರು.

ಫ್ಲೈ ಓವರ್, ಅಂಡರ್ ಪಾಸ್ ರಚನೆಯ ಸಾಧ್ಯತೆ ಕುರಿತು ಈ ಸಮಿತಿ ಪರಿಶೀಲನೆ ನಡೆಸಲಿದ್ದು, ಈ ಸಂಬಂಧ ಎ.7ರೊಳಗೆ ವರದಿ ಬರಲಿದೆ. ಆ ವರದಿಯ ಆಧಾರದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.

ಎ.8ರಂದು ಈ ಸಂಬಂಧ ಸಭೆ ಕರೆದು ಚರ್ಚಿಸಲಾಗುವುದು. ಇದೀಗ ಅಲ್ಲಿ ತಾತ್ಕಾಲಿಕವಾಗಿ ಸರ್ವಿಸ್ ರಸ್ತೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.