


ಡೈಲಿ ವಾರ್ತೆ: 11/ಏಪ್ರಿಲ್/2025


ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆ ಹಲ್ಲೆ ಪ್ರಕರಣ: ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ – ಎಸ್ಪಿ

ಕುಂದಾಪುರ: ಕುಂದಾಪುರ ಕಾಲೇಜಿನ ಹುಡುಗ ಮತ್ತು ಹುಡುಗಿಯರು ಒಟ್ಟಾಗಿ ಇದ್ದರು ಎಂಬ ಕಾರಣಕ್ಕಾಗಿ ನಡೆದ ಮಾರಲ್ ಪೊಲೀಸಿಂಗ್ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಎಸ್ಪಿ ಡಾ. ಅರುಣ್ ಕೆ. ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, “ಕಾಲೇಜಿನ ಹುಡುಗರು ಮತ್ತು ಹುಡುಗಿಯರು ಒಂದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ದೃಶ್ಯವನ್ನು ಬಸ್‌ನಲ್ಲಿ ಗಮನಿಸಿದ ಕೆಲವರು, ಹುಡುಗನ ಧರ್ಮವನ್ನು ಆಧರಿಸಿ ಆಕ್ಷೇಪ ವ್ಯಕ್ತಪಡಿಸಿ ಹಲ್ಲೆ ನಡೆಸಿದ್ದಾರೆ. ಹಲ್ಲೆಗೆ ಒಳಗಾದವರು ಅಪ್ರಾಪ್ತರಾಗಿದ್ದಾರೆ,” ಎಂದು ತಿಳಿಸಿದರು.
ಈ ಸಂಬಂಧ ಕುಂದಾಪುರ ಠಾಣೆ ಎದುರು ಶಾಸಕ ಗಂಟಿಹೊಳೆ ಅವರ ನೇತೃತ್ವದಲ್ಲಿ ಕೆಲವರು ಪ್ರತಿಭಟನೆ ನಡೆಸಿ, ಹುಡುಗಿಯೊಂದಿಗೆ ಇದ್ದವರ ವಿರುದ್ಧ ದೂರು ದಾಖಲಿಸುವಂತೆ ಆಗ್ರಹಿಸಿದರು. ಆದರೆ ಅವರು ಅಪ್ರಾಪ್ತರಾಗಿರುವ ಕಾರಣ ದೂರು ದಾಖಲಿಸಲು ಸಾಧ್ಯವಿಲ್ಲ.
“ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಗಳ ಪ್ರಕಾರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು,” ಎಂದು ಎಸ್ಪಿ ಡಾ. ಅರುಣ್ ಕೆ. ತಿಳಿಸಿದ್ದಾರೆ.