ಡೈಲಿ ವಾರ್ತೆ: 13/ಏಪ್ರಿಲ್/2025

ಜಾತಿಗಣತಿ ವರದಿ ಬಹಿರಂಗ: ಏಕ ಜಾತಿಯಾಗಿ ಮುಸ್ಲಿಮರೇ ನಂ.1

ಬೆಂಗಳೂರು: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ವರದಿ (ಜಾತಿ ಗಣತಿ) ಬಹಿರಂಗವಾಗಿದ್ದು, ವರದಿ ಪ್ರಕಾರ ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಜಾತಿ ಎಂದರೆ ಅದು ಮುಸ್ಲಿಮರು.

ಜಾತಿಗಣತಿ ಪ್ರಕಾರ, ರಾಜ್ಯದಲ್ಲಿ ಬರೋಬ್ಬರಿ 75.25 ಲಕ್ಷ ಮಂದಿ ಮುಸ್ಲಿಮರಿದ್ದಾರೆ. ಅಂದರೆ, ರಾಜ್ಯದ ಒಟ್ಟು ಜನಸಂಖ್ಯೆಯ ಶೇ.18.70ರಷ್ಟು ಮಂದಿ ಮುಸ್ಲಿಮರು ಎಂದು ವರದಿ ಹೇಳಿದೆ. ಇದೇ ಕಾರಣಕ್ಕೆ ಪ್ರವರ್ಗ 2-ಬಿ ಅಡಿ ಕೇವಲ ಮುಸ್ಲಿಂ ಸಮುದಾಯಕ್ಕೆ ನೀಡುತ್ತಿರುವ ಶೇ.4 ರಷ್ಟು ಮೀಸಲಾತಿಯನ್ನು ಶೇ.8ಕ್ಕೆ ಹೆಚ್ಚಳ ಮಾಡಬೇಕು ಎಂದು ಆಯೋಗ ಶಿಫಾರಸು ಮಾಡಿದೆ.

ಪರಿಶಿಷ್ಟ ಜಾತಿಯಲ್ಲಿ 1.09 ಕೋಟಿ (ಶೇ.18.27) ಜನಸಂಖ್ಯೆ ಇದ್ದರೂ ಈ ಪ್ರವರ್ಗದ ಅಡಿ 101 ಜಾತಿಗಳು ಇರುವುದರಿಂದ ಏಕ ಜಾತಿಯಾಗಿ ಮುಸ್ಲಿಮರ ಸಂಖ್ಯೆಯೇ ಹೆಚ್ಚು ಎಂದು ಹೇಳಲಾಗಿದೆ. ಪರಿಶಿಷ್ಟ ಪಂಗಡದಲ್ಲಿ (ಇದರಲ್ಲಿ 49 ಜಾತಿಗಳಿವೆ) 42.81 ಲಕ್ಷ ಜನಸಂಖ್ಯೆಯಿದೆ. ಲಿಂಗಾಯತ ಮತ್ತು ಉಪ ಜಾತಿಗಳನ್ನು ಒಳಗೊಂಡ ಪ್ರವರ್ಗ 3-ಬಿ ಅಡಿ 81 ಲಕ್ಷ ಮಂದಿ, ಕುರುಬರು ಸೇರಿ ವಿವಿಧ ಸಮುದಾಯ ಇರುವ ಪ್ರವರ್ಗ 2-ಎ ಅಡಿ 77.78 ಲಕ್ಷ, ಒಕ್ಕಲಿಗ ಮತ್ತು ಉಪ ಜಾತಿ ಇರುವ 3-ಎ ಅಡಿ 72.99 ಲಕ್ಷ ಜನಸಂಖ್ಯೆ ಇರುವುದಾಗಿ ಹೇಳಲಾಗಿದೆ.

ಇನ್ನು ಅತಿ ಹಿಂದುಳಿದ ವರ್ಗಗಳ ಪ್ರವರ್ಗ 1-ಎ ಅನ್ನು ಎರಡು ಪ್ರವರ್ಗಗಳಾಗಿ ವಿಂಗಡಿಸಿದ್ದು ಪ್ರವರ್ಗ 2-ಎ ಅಡಿಯಲ್ಲಿದ್ದ ಅಲೆಮಾರಿ ಸಮುದಾಯಗಳನ್ನು ಪ್ರವರ್ಗ ಒಂದರ ವ್ಯಾಪ್ತಿಗೆ ತಂದು ಪ್ರವರ್ಗ-1 ಎ ಹಾಗೂ ಪ್ರವರ್ಗ -1 ಬಿ ಎಂದು ಹೆಚ್ಚುವರಿ ವರ್ಗೀಕರಣ ಮಾಡಿದ್ದು ಎರಡೂ ಸೇರಿ 1.07 ಕೋಟಿ ಜನಸಂಖ್ಯೆ ಹೊಂದಿದ್ದಾರೆ. ಮೂಲಗಳ ಪ್ರಕಾರ ಜಾತಿವಾರು ಅಂದಾಜಿನಂತೆ ಮುಸ್ಲಿಮರ ಸಂಖ್ಯೆ 76.99 ( ಅತಿ ಹಿಂದುಳಿದ ಪ್ರವರ್ಗದಲ್ಲಿರುವ ನಧಾಫ್‌, ಪಿಂಜಾರದಂತಹ ಜಾತಿಗಳು ಸೇರಿ ) ಲಕ್ಷಕ್ಕೆ ಏರಿಕೆಯಾಗಲಿದೆ. ನಂತರದ ಸ್ಥಾನದಲ್ಲಿ ಲಿಂಗಾಯತರು 66.35 ಲಕ್ಷ, ಒಕ್ಕಲಿಗರು 61.68 ಲಕ್ಷ, ಕುರುಬರು 43.72 ಲಕ್ಷ ಇದ್ದಾರೆ. ಉಳಿದಂತೆ ಬ್ರಾಹ್ಮಣರು 15.64 ಲಕ್ಷ ಜನರು ಇದ್ದಾರೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ರಾಜ್ಯದ ಅತಿ ದೊಡ್ಡ ಗುಂಪು (ಜಾತಿ) ಮುಸ್ಲಿಮರು ಎಂದು ಈ ವರದಿ ಸ್ಪಷ್ಟಪಡಿಸಿದಂತಾಗಿದೆ.

ಮುಸ್ಲಿಮರು ಜಾತಿ ಹೇಗೆ?: ಮುಸ್ಲಿಂ ಒಂದು ಧರ್ಮ ಹಾಗೂ ಮುಸ್ಲಿಮರು ಸಾಮಾಜಿಕವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿಲ್ಲ. ಹೀಗಾಗಿ ಅವರಿಗೆ ಮೀಸಲಾತಿ ನೀಡುವ ಅಗತ್ಯವಿಲ್ಲ ಎಂದು ಹೇಳಿ 1974ರಲ್ಲಿ ಹಾವನೂರು ಆಯೋಗದ ವರದಿಯು ಲಿಂಗಾಯತ, ಕ್ರಿಶ್ಚಿಯನ್‌ ಹಾಗೂ ಮುಸ್ಲಿಮರಿಗೆ ಮೀಸಲಾತಿ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ನಡೆಸಿದ ಬಳಿಕ 1985ರಲ್ಲಿ ಸುಪ್ರೀಂ ಕೋರ್ಟ್‌ ಹಾವನೂರು ಆಯೋಗದ ವರದಿಯಲ್ಲೇ ಮುಸ್ಲಿಮರು ಶಿಕ್ಷಣ ಹಾಗೂ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿರುವುದಾಗಿ ತಿಳಿಸಲಾಗಿದೆ.

ಹೀಗಾಗಿ ಎಲ್ಲಾ ಹಿಂದುಳಿದ ವರ್ಗಗಳಂತೆ ಮುಸ್ಲಿಮರನ್ನೂ ಪರಿಗಣಿಸಿ ಮೀಸಲಾತಿಗೆ ಅರ್ಹರನ್ನಾಗಿ ಮಾಡಬೇಕು ಎಂದು ಹೇಳಿತ್ತು. ಬಳಿಕ ನೇಮಕವಾದ ವೆಂಕಟಸ್ವಾಮಿ ಆಯೋಗ ಹಾಗೂ ಚಿನ್ನಪ್ಪರೆಡ್ಡಿ ಆಯೋಗದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗದ ಜಾತಿ ಎಂದೇ ಪರಿಗಣಿಸಲಾಗಿದೆ. ಹೀಗಾಗಿ ಕಾಂತರಾಜು ಆಯೋಗ ಹಾಗೂ ಜಯಪ್ರಕಾಶ್‌ ಹೆಗ್ಡೆ ನೇತೃತ್ವದ ಆಯೋಗವು ಮುಸ್ಲಿಮರನ್ನು ಜಾತಿ ಎಂದೇ ಪರಿಗಣಿಸಿದ್ದಾರೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮೂಲಗಳು ತಿಳಿಸಿವೆ.