


ಡೈಲಿ ವಾರ್ತೆ: 13/ಏಪ್ರಿಲ್/2025


ವಕ್ಫ್ ಮಸೂದೆ ಕುರಿತು ಪ್ರಚೋದನಕಾರಿ ಹೇಳಿಕೆ| ಇಬ್ಬರ ಬಂಧನ

ದಾವಣಗೆರೆ: ವಕ್ಫ್ ತಿದ್ದುಪಡಿ ಮಸೂದೆ ಕುರಿತು ಪ್ರಚೋದನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಇತ್ತೀಚೆಗೆ ನಗರದಲ್ಲಿ ವಕ್ಫ್ ಮಸೂದೆ -2025 ರ ವಿರುದ್ಧ ವ್ಯಕ್ತಿಯೊಬ್ಬ ಪ್ರಚೋದನಕಾರಿ ಹೇಳಿಕೆ ನೀಡಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈ ವೀಡಿಯೊವನ್ನು ಆಧರಿಸಿ, ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಅಹ್ಮದ್ ಕಬೀರ್ ಖಾನ್ ಮತ್ತು ಆತನ ಸಹಚರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರ ನೇತೃತ್ವದಲ್ಲಿ ಪ್ರಕರಣದ ಆರೋಪಿಗಳನ್ನು ಹುಡುಕಲು ಆಜಾದ್ ನಗರ ಪೊಲೀಸ್ ಇನ್ಸ್‌ಪೆಕ್ಟರ್ ಅಶ್ವಿನ್ ಕುಮಾರ್ ಜೊತೆಗೆ ಸಿಬ್ಬಂದಿಯ ತಂಡವನ್ನು ರಚಿಸಲಾಗಿತ್ತು. ಇದರಂತೆ ಪೊಲೀಸರು ಪ್ರಕರಣದ ಎರಡನೇ ಆರೋಪಿ ಬಾಷಾನಗರದ ಅಬ್ದುಲ್ ಗನಿ (56) ಮತ್ತು ಮೂರನೇ ಆರೋಪಿ ಮೊಹಮ್ಮದ್ ಜುಬೈರ್ (40) ಅವರನ್ನು ಬಂಧನಕ್ಕೊಳಪಡಿಸಿದ್ದು, ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಕಬೀರ್ ಖಾನ್ ಗಾಗಿ ಹುಡುಕಾಟ ಮುಂದುವರೆಸಿದ್ದಾರೆ.
ಈ ನಡುವೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.
ಯಾವುದೇ ಪ್ರಚೋದನಕಾರಿ, ವೈಯಕ್ತಿಕ ನಿಂದನೆ, ಧಾರ್ಮಿಕ ನಿಂದನೆ, ದ್ವೇಷ ಭಾಷಣ, ದೇಶ ವಿರೋಧಿ ಪೋಸ್ಟ್‌ಗಳನ್ನು ಹಾಕುವುದು, ವಕ್ಫ್ ಮಸೂದೆ ಮತ್ತು ಇತರ ಆಕ್ಷೇಪಾರ್ಹ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕುವುದು, ಹಂಚಿಕೊಳ್ಳುವುದು ಮತ್ತು ಕೆಟ್ಟದಾಗಿ ಕಾಮೆಂಟ್ ಮಾಡುವುದು ಕಾನೂನುಬಾಹಿರವಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉಮಾ ಪ್ರಶಾಂತ್ ಅವರು ಎಚ್ಚರಿಸಿದ್ದಾರೆ.