


ಡೈಲಿ ವಾರ್ತೆ: 13/ಏಪ್ರಿಲ್/2025


ಭಾರತೀಯ ಔಷಧ ಕಂಪನಿ ಮೇಲೆ ರಷ್ಯಾ ಕ್ಷಿಪಣಿ ದಾಳಿ: ಭಾರತದ ಕಂಪನಿಗಳೇ ಟಾರ್ಗೆಟ್ ಎಂದ ಉಕ್ರೇನ್

ಕೈವ್/ಮಾಸ್ಕೋ: ಉಕ್ರೇನ್‌ನ ರಾಜಧಾನಿ ಕೈವ್‌ನಲ್ಲಿರುವ ಭಾರತೀಯ ಔಷಧ ಕಂಪನಿಯ ಗೋಡೌನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ ಮಾಡಿದೆ. ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದಲ್ಲಿರುವ ಉಕ್ರೇನ್ ರಾಯಭಾರ ಕಚೇರಿ ನಮ್ಮ ದೇಶದಲ್ಲಿರುವ ಭಾರತೀಯ ಕಂಪನಿಗಳನ್ನು ರಷ್ಯಾ ಟಾರ್ಗೆಟ್ ಮಾಡಿದೆ ಎಂದು ಆರೋಪಿಸಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಉಕ್ರೇನ್‌ನ ರಾಯಭಾರ ಕಚೇರಿ, ಭಾರತೀಯ ಔಷಧ ಕಂಪನಿ ಕುಸುಮ್‌ನ ಗೋದಾಮಿನ ಮೇಲೆ ರಷ್ಯಾ ದಾಳಿ ಮಾಡಿದೆ. ಭಾರತದೊಂದಿಗೆ ರಷ್ಯಾ ವಿಶೇಷ ಸ್ನೇಹವಿದೆ ಎಂದು ಹೇಳಿಕೊಳ್ಳುತ್ತಲೇ, ಭಾರತೀಯ ಕಂಪನಿಗಳನ್ನು ಗುರಿಯಾಗಿಸಿಕೊಂಡಿದೆ. ಮಕ್ಕಳು ಮತ್ತು ವೃದ್ಧರಿಗೆ ಮೀಸಲಾದ ಔಷಧಿಗಳನ್ನು ನಾಶಪಡಿಸಿದೆ ಎಂದು ಆಕ್ರೋಶ ಹೊರಹಾಕಿದೆ.
ಭಾರತೀಯ ಉದ್ಯಮಿ ರಾಜೀವ್ ಗುಪ್ತಾ ಒಡೆತನದ ಕುಸುಮ್, ಉಕ್ರೇನ್‌ನ ಅತಿದೊಡ್ಡ ಔಷಧ ಸಂಸ್ಥೆಗಳಲ್ಲಿ ಒಂದಾಗಿದೆ. ಅಗತ್ಯ ಔಷಧಗಳಿಗಾಗಿ ಕಂಪನಿಯ ಉತ್ಪನ್ನಗಳು ಉಕ್ರೇನ್‌ನಾದ್ಯಂತ ನಿರ್ಣಾಯಕವಾಗಿವೆ. ಇನ್ನೂ ಗೋಡೌನ್ ಮೇಲೆ ಕ್ಷಿಪಣಿ ದಾಳಿ ನಡೆದಿಲ್ಲ, ಡ್ರೋಣ್ ದಾಳಿ ನಡೆದಿದೆ ಎನ್ನಲಾಗಿದೆ.
ಮೇ 9ರಂದು ವಿಶ್ವಸಮರದ ವಿಜಯ ದಿನಾಚರಣೆಗೆ ರಷ್ಯಾ ಪ್ರಧಾನಿಯವರನ್ನು ಆಹ್ವಾನಿಸಿದೆ. ಅದಕ್ಕೂ ಮುನ್ನ ಈ ದಾಳಿ ನಡೆದಿದೆ.