



ಡೈಲಿ ವಾರ್ತೆ: 23/ಏಪ್ರಿಲ್/2025


ದ್ವಿತೀಯ ಪಿಯು ಪರೀಕ್ಷೆಯಲ್ಲಿ 97% ಅಂಕ ಗಳಿಸಿದ್ದ ಮಗನ ಸಂಭ್ರಮಾಚರಣೆಗೆ ಕಾಶ್ಮೀರಕ್ಕೆ ಹೋದ ಮಂಜುನಾಥ್ ಕುಟುಂಬ: 3 ಸ್ಥಳೀಯ ಕಾಶ್ಮೀರಿ ಪುರುಷರಿಂದ ನನ್ನ ರಕ್ಷಣೆ: ಮೃತ ಮಂಜುನಾಥ್ ಪತ್ನಿ ಪಲ್ಲವಿ

ಶಿವಮೊಗ್ಗ: ಮಂಗಳವಾರ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ನಗರದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ ರಾವ್ ಅವರ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.
ದ್ವಿತೀಯ ಪಿಯು ಪರೀಕ್ಷೆಯಲ್ಲಿ ತಮ್ಮ ಮಗ 97% ಅಂಕ ಗಳಿಸಿದ್ದ ಹೀಗಾಗಿ ಸಂಭ್ರಮಾಚರಣೆ ಮಾಡಲು 48 ವರ್ಷದ ಮಂಜುನಾಥ್ ತನ್ನ ಪತ್ನಿ ಮತ್ತು ಮಗನೊಂದಿಗೆ ಕಾಶ್ಮೀರಕ್ಕೆ ಹೋಗಿದ್ದರು.
ಮಂಜುನಾಥ್ ಮತ್ತು ಅವರ ಕುಟುಂಬ ಸದಸ್ಯರು ಏಪ್ರಿಲ್ 19 ರಂದು ಕಾಶ್ಮೀರಕ್ಕೆ ತೆರಳಿದ್ದರು. ಅವರು ಏಪ್ರಿಲ್ 24 ರಂದು ಶಿವಮೊಗ್ಗಕ್ಕೆ ಹಿಂತಿರುಗಬೇಕಿತ್ತು. ಪ್ರವಾಸವನ್ನು ಏಜೆನ್ಸಿಯ ಮೂಲಕ ಬುಕ್ ಮಾಡಲಾಗಿತ್ತು ಎಂದು ಕುಟುಂಬದ ಆಪ್ತ ಮೂಲಗಳು ಟಿಎನ್‌ಐಇಗೆ ತಿಳಿಸಿವೆ. ಭಯೋತ್ಪಾದಕರು ನನ್ನ ಗಂಡನನ್ನು ನನ್ನ ಕಣ್ಣೆದುರೇ ಗುಂಡಿಕ್ಕಿ ಕೊಂದಿದ್ದಾರೆ ಎಂದು ಮಂಜುನಾಥ್ ಅವರ ಪತ್ನಿ ಪಲ್ಲವಿ ಸುದ್ದಿ ವಾಹಿನಿಗಳಿಗೆ ತಿಳಿಸಿದ್ದಾರೆ.
ನನ್ನ ಮಗ ಬೆಳಿಗ್ಗೆಯಿಂದ ಏನನ್ನೂ ತಿಂದಿರಲಿಲ್ಲ. ಹೀಗಾಗಿ ನನ್ನ ಪತಿ ಅಂಗಡಿಯವನೊಂದಿಗೆ ಮಾತನಾಡುತ್ತಿದ್ದಾಗ ಭಯೋತ್ಪಾದಕರು ಗುಂಡು ಹಾರಿಸಿದರು. ಅವರ ತಲೆಗೆ ಗುಂಡು ಬಿತ್ತು, ಮೂರರಿಂದ ನಾಲ್ಕು ಭಯೋತ್ಪಾದಕರು ಪ್ರವಾಸಿಗರ ಮೇಲೆ ದಾಳಿ ಮಾಡಿದರು. ನನ್ನ ಗಂಡನನ್ನು ಕೊಂದ ನಂತರ, ನಾನು ಅವರಲ್ಲಿ ಒಬ್ಬನನ್ನು ನನ್ನನ್ನೂ ಕೊಲ್ಲುವಂತೆ ಕೇಳಿದೆ. ಅವನು, ‘ನಹಿನ್ ಮಾರೇಂಗೆ, ಮೋದಿ ಕೋ ಬೋಲ್ಡೋ’ (ನಾವು ನಿನ್ನನ್ನು ಕೊಲ್ಲುವುದಿಲ್ಲ, ಪ್ರಧಾನಿ ಮೋದಿಗೆ ಹೇಳು) ಎಂದು ಹೇಳಿ ಹೊರಟುಹೋದನು. ದಾಳಿಯ ಸಮಯದಲ್ಲಿ ಯಾವುದೇ ಸೇನಾ ಸಿಬ್ಬಂದಿ ಇರಲಿಲ್ಲ” ಎಂದು ಅವರು ಹೇಳಿದ್ದಾರೆ.
ಮೂವರು ಸ್ಥಳೀಯ ಕಾಶ್ಮೀರಿ ಪುರುಷರು “ಬಿಸ್ಮಿಲ್ಲಾ, ಬಿಸ್ಮಿಲ್ಲಾ” ಎಂದು ಘೋಷಣೆ ಕೂಗುತ್ತಾ ನನ್ನನ್ನು ರಕ್ಷಿಸಿದರು ಎಂದು ಪಲ್ಲವಿ ಹೇಳಿದರು. “ಅವರು ನನ್ನ ಸಹೋದರರಂತೆ” ಎಂದು ಪಲ್ಲವಿ ಹೇಳಿದರು.