ಡೈಲಿ ವಾರ್ತೆ: 10/MAY/2025

ತಕ್ಷಣದಿಂದಲೇ ಅನ್ವಯಿಸುವಂತೆ ಭಾರತ – ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆ

ನವದೆಹಲಿ: ಜಮ್ಮು- ಕಾಶ್ಮೀರದ ಪಹಲ್ಗಾಮ್​ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಭಾರತ ನಡೆಸಿದ ದಾಳಿಗೆ ತತ್ತರಿಸಿದ ಪಾಕಿಸ್ತಾನ ಕದನ ವಿರಾಮ ಯಾಚಿಸಿದೆ. ಇದನ್ನು ಭಾರತವೂ ಒಪ್ಪಿಕೊಂಡಿದ್ದು, ಕಳೆದ 4 ದಿನಗಳಿಂದ ನಡೆಯುತ್ತಿದ್ದ ಸಂಘರ್ಷ ತಕ್ಷಣದಿಂದಲೇ ನಿಂತಿದೆ.

ಸಂಘರ್ಷಕ್ಕೆ ಕದನ ವಿರಾಮ ನೀಡಿದ್ದಾಗಿ ಭಾರತ ಮತ್ತು ಪಾಕಿಸ್ತಾನ ಘೋಷಿಸಿವೆ. ಇದಕ್ಕೂ ಮೊದಲು, ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಉಭಯ ರಾಷ್ಟ್ರಗಳ ನಡುವೆ ಮಾತುಕತೆ ನಡೆಸಲಾಗಿತ್ತು. ಎರಡೂ ರಾಷ್ಟ್ರಗಳು ಬುದ್ಧಿವಂತಿಕೆ ಪ್ರದರ್ಶಿಸಿ ಸಂಘರ್ಷಕ್ಕೆ ಅಂತ್ಯ ಹಾಡಿವೆ ಎಂದು ತಮ್ಮ ಎಕ್ಸ್​ ಖಾತೆಯಲ್ಲಿ ಘೋಷಿಸಿದ್ದರು.

ಕದನ ವಿರಾಮಕ್ಕೆ ವಿಶ್ವಸಂಸ್ಥೆ ಸೇರಿದಂತೆ ಹಲವು ರಾಷ್ಟ್ರಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಜಮ್ಮು- ಕಾಶ್ಮೀರದ ಮುಖ್ಯಮಂತ್ರಿ ಓಮರ್​ ಅಬ್ದುಲ್ಲಾ ಅವರು ಕೂಡ ಸಂಘರ್ಷಕ್ಕೆ ವಿರಾಮ ಬಿದ್ದಿದ್ದನ್ನು ಸ್ವಾಗತಿಸಿದ್ದಾರೆ.

ಟ್ರಂಪ್​ ಟ್ವೀಟ್​: ತಕ್ಷಣದಿಂದಲೇ ಜಾರಿಗೆ ಬರುವಂತೆ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಘೋಷಣೆಗೆ ಒಪ್ಪಿಕೊಂಡಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿದ್ದಾರೆ.
ಅಮೆರಿಕವು ಉಭಯ ರಾಷ್ಟ್ರಗಳ ನಡುವೆ ಮಧ್ಯಸ್ತಿಕೆ ವಹಿಸಿ, ಸತತ ಮಾತುಕತೆ ನಡೆಸಿದ ಬಳಿಕ ಎರಡೂ ರಾಷ್ಟ್ರಗಳು ಕದನ ವಿರಾಮಕ್ಕೆ ಸಮ್ಮತಿಸಿವೆ ಎಂದು ಅವರು ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.

ಕದನ ವಿರಾಮ ದೃಢಪಡಿಸಿದ ಭಾರತ: ಈ ನಡುವೆ ಕದನ ವಿರಾಮವನ್ನು ಭಾರತ ಕೂಡಾ ಖಚಿತಪಡಿಸಿದೆ. ಈ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್​ ಮಿಶ್ರಿ ಚುಟುಕು ಸುದ್ದಿಗೋಷ್ಠಿ ನಡೆಸಿ ಕದನ ವಿರಾಮಕ್ಕೆ ಭಾರತ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು. ಪಾಕ್​ ಈ ಬಗ್ಗೆ ಮೊದಲು ಪ್ರಸ್ತಾಪ ಮಾಡಿತ್ತು. ಇದನ್ನು ನಾವು ಒಪ್ಪಿದ್ದೇವೆ. ಶನಿವಾರ ಸಂಜೆ 5 ಗಂಟೆಯಿಂದಲೇ ಅನ್ವಯಿಸುವಂತೆ ಕದನ ವಿರಾಮ ಜಾರಿಗೆ ಬಂದಿದೆ ಎಂದು ತಿಳಿಸಿದ್ದಾರೆ.

ಪಾಕ್​​ನಿಂದಲೂ ಪ್ರತಿಕ್ರಿಯೆ: ಪಾಕಿಸ್ತಾನ ಉಪ ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ ತಕ್ಷಣದಿಂದ ಜಾರಿಗೆ ಬರುವಂತೆ ಕದನ ವಿರಾಮ ಘೋಷಿಸಲಾಗಿದೆ ಎಂದು ದೃಢಪಡಿಸಿದ್ದಾರೆ.

ಪಾಕಿಸ್ತಾನ ಮತ್ತು ಭಾರತ ತಕ್ಷಣದಿಂದ ಜಾರಿಗೆ ಬರುವಂತೆ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಪಾಕಿಸ್ತಾನವು ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆಯಾಗದಂತೆ ಈ ಪ್ರದೇಶದಲ್ಲಿ ಶಾಂತಿ ಮತ್ತು ಸುರಕ್ಷತೆಗಾಗಿ ಯಾವಾಗಲೂ ಶ್ರಮಿಸಿದೆ ಎಂದು ದಾರ್ ಎಕ್ಸ್‌ ಪೋಸ್ಟ್‌ನಲ್ಲಿ ಹೇಳಿದ್ದಾರೆ.