



ಡೈಲಿ ವಾರ್ತೆ: 14/MAY/2025


ಕಿನ್ನಿಗೋಳಿ : ಕೊರಗರಿಗೆ ಜಾಗದ ಹಕ್ಕುಪತ್ರ ವಿತರಣೆ

ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ) ಕರ್ನಾಟಕ – ಕೇರಳ ಹಾಗೂ ಕೊರಗ ಅಭಿವೃದ್ಧಿ ಸಂಘ ಕಿನ್ನಿಗೋಳಿ ಇವರ ಸಂಯೋಜನೆಯಲ್ಲಿ, ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕರಾದ ಉಮಾನಾಥ ಕೋಟ್ಯಾನ್ ಇವರ ನೇತೃತ್ವದಲ್ಲಿ ಕೊಲ್ಲೂರು ಭೂಮಿಯ 30 ಫಲಾನುಭವಿಗಳ ಪೈಕಿ 9 ಫಲಾನುಭವಿಗಳಿಗೆ ಮೂಲ್ಕಿ ನಗರ ಸಭೆ ಕಾರ್ಯಾಲಯದ ಸಭಾಂಗಣದಲ್ಲಿ ಹಕ್ಕುಪತ್ರ ವಿತರಣೆ ಸಭೆ ಕರೆಯಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮೂಡಬಿದ್ರೆ ತಹಶೀಲ್ದಾರರಾಗಿರುವ ಶ್ರೀಧರ್.ಎಸ್ ಮುಂದಲಮನಿ ಇವರು ಸ್ವಾಗತಿಸಿ, ಕಾರ್ಯಕ್ರಮದ ಕುರಿತಾಗಿ ಮಾತನಾಡಿದರು. ಈ ಪ್ರಕಾರ ಈಗಾಗಲೇ ಉಳಿದ 21 ಫಲಾನುಭವಿಗಳಿಗೆ ಕಲ್ಲಮುಂಡ್ಕೂರು ಗ್ರಾಮದ ಸರ್ವೇ ನಂಬರ್ 343 ರಲ್ಲಿ ಭೂಮಿಯನ್ನು ಗುರುತಿಸಿದ್ದು, 16-05-2025 ರ ಒಳಗಾಗಿ ಇದರ ಮುಂದಿನ ಕ್ರಮವನ್ನು ಕೈಗೊಳ್ಳುವುದಾಗಿ ತಿಳಿಸಿದರು.
ತದನಂತರದಲ್ಲಿ ಐ.ಟಿ.ಡಿ.ಪಿ ಅಧಿಕಾರಿಯಾಗಿರುವ ಬಸವರಾಜ್ ಇವರು ತಾಳಿಪಾಡಿ ಗ್ರಾಮದ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೊಲ್ಲೂರು ಪದವು ಸರ್ವೆ ನಂಬರ್ 92ರ ಕುರಿತಾಗಿ ಮಾತನಾಡಿದರು, ಶೀಘ್ರದಲ್ಲಿ 9 ಫಲಾನುಭವಿಗಳಿಗೆ ತಲಾ 14 ಸೆನ್ಸ್ ಪ್ರಕಾರ ಐ.ಟಿ.ಡಿ.ಪಿ ವತಿಯಿಂದ ಪ್ಲಾನಿಂಗ್ ಮಾಡುವುದರ ಮೂಲಕ ಕುಡಿಯುವ ನೀರು, ರಸ್ತೆ, ವಿದ್ಯುತ್ ಸಂಪರ್ಕಕ್ಕೆ ಸೋಲಾರ್ ಅಳವಡಿಕೆ, ಚರಂಡಿ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುವುದು, ಈಗಾಗಲೇ 65 ಲಕ್ಷ ವೆಚ್ಚದಲ್ಲಿ ಅನುಮೋದನೆ ನೀಡಿದ್ದು ಶೀಘ್ರದಲ್ಲಿ ಸುಸಜ್ಜಿತವಾದ ಮನೆಯನ್ನು ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು. ಈ ಕುರಿತಾಗಿ ಚರ್ಚೆ ನಡೆಸಲು ಸಭೆ ಕರೆಯುವುದಾಗಿ ತಿಳಿಸಿದರು.

ನಂತರ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಸಂಯೋಜಕರಾದ ಕೆ.ಪುತ್ರನ್ ರವರು ಸಂಘಟನೆಯ ಪರಿಶ್ರಮದ ಫಲದಿಂದಾಗಿ ಹಾಗೂ ಕಿನ್ನಿಗೋಳಿ ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳ ಪರಿಶ್ರಮದಿಂದಾಗಿ ಹಕ್ಕುಪತ್ರ ವಿತರಣೆ ಹಂತಕ್ಕೆ ತಲುಪಿದ್ದು ಖುಷಿಯ ವಿಚಾರ. ಅಧಿಕಾರಿಗಳ ನಿರ್ಲಕ್ಷತನದಿಂದಾಗಿ ಅನೇಕ ವರ್ಷಗಳು ಸಂದಿದ್ದು ಇನ್ನಾದರೂ ಎಚ್ಚೆತ್ತುಕೊಂಡು ಸಮುದಾಯದ ಪರವಾಗಿ ಒಳ್ಳೆಯ ಕಾರ್ಯವನ್ನು ಮಾಡಬೇಕಾಗಿ ಈ ಮೂಲಕವಾಗಿ ವಿನಂತಿಸಿದರು.
ನಂತರ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕರಾದ ಉಮಾನಾಥ್ ಕೋಟ್ಯಾನ್ ಇವರು ಸಮುದಾಯದ ಬಗ್ಗೆ ಕಾಳಜಿ ಹೊಂದಿರುವರಾಗಿದ್ದು, ಇವರ ಮುಂದಾಳತ್ವದಲ್ಲಿ ಹಾಗೂ ಸಂಘಟನೆಯ ಅನೇಕ ವರ್ಷಗಳ ಸತತ ಪರಿಶ್ರಮದಿಂದಾಗಿ ಇಂದು ಹಕ್ಕುಪತ್ರ ವಿತರಣೆಯಾಗಿದ್ದು, 15 ವರ್ಷಗಳ ಪರಿಶ್ರಮಕ್ಕೆ ಸಿಕ್ಕ ಫಲವಾಗಿದೆ ಎಂದರು. ಅಧಿಕಾರಿಗಳ ನಿರ್ಲಕ್ಷದಿಂದಾಗಿ ಕೇವಲ 9 ಕುಟುಂಬಗಳು ಹಕ್ಕುಪತ್ರ ಪಡೆಯಲು 15 ವರ್ಷ ಕಾಯಬೇಕಾಯಿತು. ಇನ್ನುಳಿದ ಫಲಾನುಭವಿಗಳಿಗೆ ಅತೀ ಶೀಘ್ರದಲ್ಲಿ ಹಕ್ಕುಪತ್ರ ವಿತರಣೆಯನ್ನು ಮಾಡಿಸುವುದು ನನ್ನ ಜವಬ್ದಾರಿಯಾಗಿರುತ್ತದೆ ಎಂದು ಶಾಸಕರು ಭರವಸೆ ನೀಡಿದರು.

ಕೊನೆಯದಾಗಿ ಅಧ್ಯಕ್ಷರಾಗಿರುವ ಸುಶೀಲಾ ನಾಡ ಇವರು ಸಮುದಾಯದ ಸಂಘಟನೆಯ ಪರಿಶ್ರಮದ ಕುರಿತು ಮಾತನಾಡಿದರು. ಈ ಕುರಿತಾಗಿ ಅಧಿಕಾರಿಗಳು ಜವಬ್ದಾರಿಯಿಂದ ಪ್ರಕ್ರಿಯೆಗಳನ್ನು ಅನುಸರಿಸಿ ಸಮುದಾಯದ ಪರವಾಗಿ ಕಾಳಜಿಯಿಂದ ಕೆಲಸ ಮಾಡಬೇಕಾಗಿ ಕೇಳಿಕೊಂಡರು. ಸಾಮಾಜಿಕರಣ ಪ್ರಕ್ರಿಯೆಯಲ್ಲಿ ತಳಮಟ್ಟದಲ್ಲಿರುವ ಕೊರಗ ಸಮುದಾಯದವರಿಗೆ ಸ್ವಂತವಾಗಿ ಒಂದು ಮನೆಯನ್ನು ಮಾಡಿಕೊಂಡು ಜೀವನ ಸಾಗಿಸಬೇಕೆಂಬುದು ಕನಸಾಗಿರುತ್ತದೆ. ಈ ಮೂಲಕ ಕನಸು ನನಸಾಗುವ ಕಾರ್ಯಕ್ಕೆ ಕೈ ಜೋಡಿಸಿದ ಅಧಿಕಾರಿಗಳಿಗೆ ಹಾಗೂ ಒಕ್ಕೂಟದ ಮತ್ತು ಕಿನ್ನಿಗೋಳಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರೆಲ್ಲರಿಗೂ ಧನ್ಯವಾದ ಸಮರ್ಪಿಸಿದರು.