ಡೈಲಿ ವಾರ್ತೆ: 15/MAY/2025

ಕಾರ್ಕಳ| ಶಸ್ತ್ರಚಿಕಿತ್ಸೆ ವೇಳೆ ಮಹಿಳೆಯ ಸಾವು, ವೈದ್ಯರ ನಿರ್ಲಕ್ಷ್ಯ ಆರೋಪ – ಮೃತ ಕುಟುಂಬಸ್ಥರಿಂದ ವೈದ್ಯರ ವಿರುದ್ಧ ಪ್ರತಿಭಟನೆ

ಕಾರ್ಕಳ:ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಲ್ಲಿನ ಗಡ್ಡೆಯನ್ನು ಹೊರತೆಗೆಯುವ ಸಂದರ್ಭದಲ್ಲಿ ವಿಪರೀತ ರಕ್ತಸ್ರಾವದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ಮೃತ ಮಹಿಳೆಯ ಸಂಬಂಧಿಕರು ಆಸ್ಪತ್ರೆಯಲ್ಲಿ ವೈದ್ಯರ ವಿರುದ್ಧ ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ ಘಟನೆ ಕಾರ್ಕಳದ ಸ್ಪಂದನ ಆಸ್ಪತ್ರೆಯಲ್ಲಿ ಬುಧವಾರ ಸಂಜೆ ನಡೆದಿದೆ.

ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಜುಬೇದಾ(54) ಎಂಬವರು ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಅವರು ಸಾಣೂರಿನ ಕ್ಲಿನಿಕ್ ಗೆ ತಪಾಸಣೆ ಮಾಡಿಸಿದಾಗ ಅವರು ಹೊಟ್ಟೆಯಲ್ಲಿ ಗಡ್ಡೆ ಬೆಳೆದ ಕಾರಣದಿಂದ ಶಸ್ತ್ರಚಿಕಿತ್ಸೆ ನಡೆಸುವಂತೆ ಶಿಫಾರಸ್ಸು ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಜುಬೇದಾ ಅವರನ್ನು ಬುಧವಾರ
ಕಾರ್ಕಳದ ಸ್ಪಂದನ ಆಸ್ಪತ್ರೆಗೆ ದಾಖಲಿಸಿದ್ದರು.
ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಲ್ಲಿನ ಗಡ್ಡೆ ಹೊರತೆಗೆಯಲು ಯತ್ನಿಸಿದಾಗ ವಿಪರೀತ ರಕ್ತಸ್ರಾವದಿಂದ
ಜುಬೇದಾ ಮೃತಪಟ್ಟಿದ್ದಾರೆ ಎಂದು ಆಕೆಯ ಸಂಬಂಧಿಕರು ಆರೋಪಿಸಿದ್ದಾರೆ.

ರಕ್ತಸಿಕ್ತ ಬಟ್ಟೆಗಳನ್ನು ಬೆಡ್ ಬಳಿ ಹಾಕಲಾದ ದೃಶ್ಯ ಇದಕ್ಕೆ ಪುಷ್ಟಿ ನೀಡುವಂತಿತ್ತು ಮಹಿಳೆ ಮೃತಪಟ್ಟ ಬಳಿಕ ಅವರ ಸಂಬಂಧಿಕರು ಹಾಗೂ ಸ್ಥಳೀಯರು ಆಸ್ಪತ್ರೆಯಲ್ಲಿ ಜಮಾಯಿಸಿ ವೈದ್ಯರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ನಿಮ್ಮ ನಿರ್ಲಕ್ಷ್ಯದಿಂದಲೇ ಮಹಿಳೆಯ ಸಾವು ಸಂಭವಿಸಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು.