



ಡೈಲಿ ವಾರ್ತೆ: 19/MAY/2025


ಬೈಕ್ ಮೇಲೆ KSRTC ಬಸ್ ಪಲ್ಟಿ: ಪಿಎಸ್ಐ ಸೇರಿ ಇಬ್ಬರು ಸಾವು!

ರಾಮನಗರ: ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಪಿಎಸ್‌ಐ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಕನಕಪುರದ ಕಗ್ಗಲೀಪುರ ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ.
ಅಪಘಾತದಲ್ಲಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪಿಎಸ್ಐ ನಾಗರಾಜ್ ಹಾಗೂ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಗಾಯಾಳುಗಳ ಪೈಕಿ ಒಬ್ಬರನ್ನು ನಿಮಾನ್ಸ್ ಹಾಗೂ ಉಳಿದ ಮೂರು ಮಂದಿ ಗಾಯಾಳುಗಳನ್ನು ದಯಾನಂದ ಸಾಗರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಪಘಾತದ ವಿವರ: ಇಂದು ಬೆಳಗ್ಗೆ ಕನಕಪುರದಿಂದ ಬೆಂಗಳೂರಿಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಕಗ್ಗಲೀಪುರದ ಬಳಿ ಅಪಘಾತಕ್ಕೀಡಾಗಿದೆ. ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆ ವಿಭಜಕ ದಾಟಿ, ಪಕ್ಕದ ರಸ್ತೆಗೆ ನುಗ್ಗಿ ಎದುರಿಗೆ ಬಂದ ಬೈಕ್ಗೆ ಡಿಕ್ಕಿ ಹೊಡೆದಿದೆ. ಬೈಕ್ನಲ್ಲಿ ತೆರಳುತ್ತಿದ್ದ ಪಿಎಸ್ಐ ನಾಗರಾಜ್ ಮತ್ತು ಮತ್ತೊಬ್ಬರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಬಳಿಕ ಬೈಕ್ ಸಮೇತ ಬಸ್ ಪಕ್ಕದ ತಗ್ಗುಪ್ರದೇಶಕ್ಕೆ ನುಗ್ಗಿದ್ದು, ಪಲ್ಟಿಯಾಗಿದೆೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.
ಕೆಎಸ್ಆರ್ಟಿಸಿ ಬಸ್ ಚಾಲಕನ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.