ಡೈಲಿ ವಾರ್ತೆ: 23/MAY/2025

ಮಂಗಳೂರು: ಮದುವೆ ವಿಚಾರದಲ್ಲಿ ಜಗಳ – ಯುವಕನೋರ್ವನಿಂದ ತಂದೆ-ಮಕ್ಕಳಿಗೆ ಚೂರಿ ಇರಿತ, ತಂದೆ ಮೃತ್ಯು!

ಮಂಗಳೂರು: ಮದುವೆ ವಿಚಾರದಲ್ಲಿ ನಡೆದ ಕಲಹದಿಂದ ಯುವಕನೋರ್ವನು ತಂದೆ-ಮಕ್ಕಳಿಗೆ ಚೂರಿಯಿಂದ ಇರಿದ ಪರಿಣಾಮ ತಂದೆ ಮೃತಪಟ್ಟು, ಮಕ್ಕಳಿಬ್ಬರು ಗಾಯಗೊಂಡ ಘಟನೆ ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ವಳಚ್ಚಿಲ್ ಎಂಬಲ್ಲಿ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ವಾಮಂಜೂರಿನ ನಿವಾಸಿ ಸುಲೇಮಾನ್ (50) ಮೃತಪಟ್ಟವರು.
ಘಟನೆಯಲ್ಲಿ ಅವರ ಮಕ್ಕಳಾದ ರಿಯಾಬ್ ಮತ್ತು ಸಿಯಾಬ್ ಗಾಯಗೊಂಡಿದ್ದಾರೆ. ಆರೋಪಿ ಮುಸ್ತಫಾ(30)ನನ್ನು ಬಂಧಿಸಲಾಗಿದೆ.

ಮೇ 22ರ ರಾತ್ರಿ ಸುಲೇಮಾನ್ ಅವರಿಗೆ ಮುಸ್ತಫಾ ಕರೆ ಮಾಡಿ ನಿಂದಿಸಿದ್ದ. ಆದ್ದರಿಂದ ಸುಲೇಮಾನ್ ತಮ್ಮ ಮಕ್ಕಳಾದ ರಿಯಾಬ್ ಮತ್ತು ಸಿಯಾಬ್ ಅವರೊಂದಿಗೆ ವಳಚ್ಚಿಲ್‌ನಲ್ಲಿರುವ ಮುಸ್ತಫಾ ನಿವಾಸಕ್ಕೆ ಭೇಟಿ ನೀಡಿದ್ದರು. ಸುಲೇಮಾನ್ ಮನೆಯೊಳಗೆ ಹೋಗಿ ಮುಸ್ತಫಾನೊಂದಿಗೆ ಮಾತನಾಡಿ ಕೆಲ ಹೊತ್ತಿನಲ್ಲಿ ಹಿಂದುರಿಗಿ, ಮಾತುಕತೆ ಫಲಪ್ರದವಾಗಿಲ್ಲ, ನಾವು ಹೊರಡೋಣ ಎಂದು ಮಕ್ಕಳಿಗೆ ಸೂಚಿಸಿದ್ದರು.

ಅಷ್ಟರಲ್ಲಿ ಮುಸ್ತಫಾ ಮನೆಯಿಂದ ಓಡಿ ಬಂದು ಬ್ಯಾರಿ ಭಾಷೆಯಲ್ಲಿ ಬೆದರಿಕೆ ಹಾಕುತ್ತಾ ಏಕಾಏಕಿ ಸುಲೇಮಾನ್‌ಗೆ ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾನೆ ಎನ್ನಲಾಗಿದೆ. ಸುಲೇಮಾನ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಬಳಿಕ ಸಿಯಾಬ್‌ನ ಎದೆಯ ಎಡಭಾಗಕ್ಕೆ ಮತ್ತು ರಿಯಾಬ್‌ನ ಬಲ ಮುಂದೋಳಿಗೂ ಇರಿದು ಅವರ ಕೊಲೆಗೂ ಯತ್ನಿಸಿದ್ದಾನೆ.

ತಕ್ಷಣ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ತಪಾಸಣೆ ನಡೆಸಿದ ವೈದ್ಯರು ಸುಲೇಮಾನ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.
ರಿಯಾಬ್ ಮತ್ತು ಸಿಯಾಬ್‌ಗೆ ಚಿಕಿತ್ಸೆ ನಡೆಯುತ್ತಿದೆ.
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು
ಆರೋಪಿ ಮುಸ್ತಫಾನನ್ನು ಬಂಧಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.