ಡೈಲಿ ವಾರ್ತೆ: 24/MAY/2025

ಬೆಳಗಾವಿ: 17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ, ಸ್ವಾಮೀಜಿ ಬಂಧನ

ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮೇಕಳಿ ಗ್ರಾಮದ ಪ್ರಸಿದ್ಧ ರಾಮಮಂದಿರ ಮಠದ ಪೀಠಾಧಿಪತಿಗಳ ವಿರುದ್ಧ ಇದೀಗ ಅತ್ಯಾಚಾರದಂತಹ ಗಂಭೀರ ಆರೋಪ ಕೇಳಿಬಂದಿದೆ! ಬಹುಸಂಖ್ಯೆಯ ಭಕ್ತಾದಿಗಳನ್ನು ಹೊಂದಿರುವ ಈ ಮಠದ ಲೊಕೇಶ್ವರ ಸ್ವಾಮೀಜಿಯವರ ವಿರುದ್ಧ ಮೂಡಲಗಿ ಪೊಲೀಸರು ಪೋಕ್ಸೋ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆಯಿಂದ ಮಠದ ಭಕ್ತರು ತೀವ್ರ ವಿಚಲಿತರಾಗಿದ್ದು, ಸ್ವಾಮೀಜಿಗಳ ಬಗ್ಗೆ ಆಕ್ರೋಶಗೊಂಡಿದ್ದಾರೆ. ಪ್ರಕರಣನ್ನು ಶೀಘ್ರ ತನಿಖೆ ನಡೆಸಿ, ಸ್ವಾಮೀಜಿಗಳ ವಿರುದ್ಧದ ಆರೋಪ ಸಾಬೀತಾದರೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಸ್ವಾಮೀಜಿಯ ಬಗ್ಗೆ ಬಹು ಸಮಯದಿಂದಲೂ ಅನಾಚಾರಗಳ ಬಗ್ಗೆ ಕೇಳಿಬರುತ್ತಿದ್ದು, ಇವರಿಂದಾಗಿ ತಮ್ಮ ಊರಿನ ಘನತೆಗೆ ಕುಂದುಂಟಾಗಿದೆ ಎಂದು ಹೇಳಿದ್ದಾರೆ.

ಪ್ರಕರಣದ ವಿವರ : ಮಠದ ಭಕ್ತರೋರ್ವರ ಪುತ್ರಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದು 17ವರ್ಷದ ಅಪ್ರಾಪ್ತೆ ಬಾಲಕಿ ಮೇ 13 ರಂದು ಕಾನಟ್ಟಿ ಗ್ರಾಮದ ಸೋದರ ಮಾವನ ಮನೆಯಿಂದ ಮನೆ ಕಡೆಗೆ ಹೋಗುತ್ತಿರುವಾಗ ಅದೇ ಮಾರ್ಗವಾಗಿ ಕಾರಿನಲ್ಲಿ ಬಂದ ಸ್ವಾಮೀಜಿ, ತಾನು ಆಕೆಯ ಮನೆ ಕಡೆ ಯೇ ಹೋಗುತ್ತಿರುವುದಾಗಿ ಹೇಳಿ ಆಕೆಯನ್ನು ಕಾರು ಹತ್ತಿಸಿಕೊಂಡರು. ಪರಿಚಿತ ಸ್ವಾಮೀಜಿ ಎಂದರಿತ ಬಾಲಕಿ ಕಾರು ಹತ್ತಿದಳು. ಆದರೆ, ಸ್ವಾಮೀಜಿಯ ಆಂತರ್ಯವೇ ಬೇರೆಯಾಗಿದ್ದು, ಕಾರು ಆಕೆಯ ಮನೆ ಮುಂದೆ ನಿಲ್ಲದೆ ಸೀದಾ ರಾಯಚೂರು ಕಡೆಗೆ ಧಾವಿಸಿತು. ಬಾಲಕಿಯ ಪ್ರತಿರೋಧವನ್ನೂ ಲೆಕ್ಕಿಸದೆ ಸ್ವಾಮೀಜಿ ರಾಯಚೂರಿನ ಲಾಡ್ಜ್ ಒಂದರಲ್ಲಿರಿಸಿ ಎರಡು ದಿನ ಆಕೆಯ ಮೇಲೆ ಅತ್ಯಾಚಾರ ನಡೆಸಿದರು ಎನ್ನಲಾಗಿದೆ. ನಂತರ ಮಹಾಲಿಂಗಪುರದ ಬಸ್ ಸ್ಟ್ಯಾಂಡ್ ನಲ್ಲಿ ಬಾಲಕಿಯನ್ನಿಳಿಸಿ, ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಸಿ ತೆರಳಿದರು.

ನಂತರ ಬಾಲಕಿ ಕುಟುಂಬದವರಿಗೆ ವಿಷಯ ತಿಳಿಸಿದ್ದು, ಪೊಲೀಸ್ ದೂರು ದಾಖಲಿಸಲಾಗಿದೆ. ದೂರು ದಾಖಲಿಸಿಕೊಂಡ ಮೂಡಲಗಿ ಪೊಲೀಸರು ಸ್ವಾಮೀಜಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಇತ್ತ ಸ್ವಾಮೀಜಿ ಪೋಲೀಸರ ವಶವಾಗುತ್ತಿದ್ದಂತೆಯೇ ಮಠದಲ್ಲಿ ಪರಿಶೀಲನೆ ನಡೆಸಿದ ಜನರಿಗೆ ಧರ್ಮ ಗ್ರಂಥಗಳು, ಪ್ರಸಾದಗಳ ಬದಲಿಗೆ ಮಾರಕಾಸ್ತ್ರಗಳು ಪತ್ತೆಯಾಗಿವೆ ಎನ್ನಲಾಗಿದೆ. ಲೋಕೇಶ್ವರ ಸ್ವಾಮೀಜಿ ಧರ್ಮ ಮಾರ್ಗವನ್ನು ಬಿಟ್ಟು ಅಕ್ರಮಗಳಲ್ಲೇ ಭಾಗಿಯಾಗಿದ್ದರು ಎಂದು ಗ್ರಾಮಸ್ಥರು ದೂರಿದ್ದಾರೆ. ಇವರು ಹಣದ ಆಸೆಯಿಂದ ಅಕ್ಕಪಕ್ಕದ ಜಿಲ್ಲೆಗಳವರಿಗೆ ಮಟ್ಕಾ ನಂಬರ್ ತಿಳಿಸುವುದು ಇತ್ಯಾದಿ ಮಠದ ಹಿತಾಸಕ್ತಿಗೆ ವ್ಯತಿರಿಕ್ತವಾದ ಅಕೃತ್ಯಗಳನ್ನೇ ಮಾಡುತ್ತಿದ್ದರು ಎನ್ನಲಾಗಿದೆ. ಆದ್ದರಿಂದ ಲೊಕೇಶ್ವರ ಸ್ವಾಮೀಜಿಯವರಿಗೆ ತಕ್ಕ ದಂಡನೆಯಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.