ಡೈಲಿ ವಾರ್ತೆ: 24/MAY/2025

ಬೆಂಗಳೂರಲ್ಲಿ 9 ತಿಂಗಳ ಮಗು ಸೇರಿ ಮೂರು ಮಕ್ಕಳಿಗೆ ಕೊರೊನಾ ಪಾಸಿಟಿವ್‌ – ರಾಜ್ಯದಲ್ಲಿ ಮತ್ತೆ ಕೊರೊನಾ ಹಾವಳಿ; ನಾಳೆಯಿಂದಲೇ ಕೋವಿಡ್‌ ಟೆಸ್ಟ್‌ ಆರಂಭ

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೋವಿಡ್‌ (Covid-19) ತೀವ್ರತೆ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ 9 ತಿಂಗಳ ಮಗು ಸೇರಿ ಮೂರು ಮಕ್ಕಳಿಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ.

ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ. ಯಾವುದೇ ಆರೋಗ್ಯ ಸಮಸ್ಯೆ ಇಲ್ಲ. ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ನಾಳೆಯಿಂದಲೇ ಕೋವಿಡ್‌ ಪರೀಕ್ಷೆ ಆರಂಭಿಸುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಒಟ್ಟು 35 ಕೊರೊನಾ ಪ್ರಕರಣಗಳು.
ಆ ಪೈಕಿ ಬೆಂಗಳೂರಿನಲ್ಲೇ 33 ಕೇಸ್‌ಗಳು ವರದಿಯಾಗಿವೆ. ಗರ್ಭಿಣಿಯರು, ಮಕ್ಕಳು, ಹಿರಿಯರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ದೇಶಾದ್ಯಂತ 257 ಸಕ್ರಿಯ ಕೊರೊನಾ ಪ್ರಕರಣಗಳು ವರದಿಯಾಗಿವೆ. ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಮೂರು ರಾಜ್ಯಗಳು ಒಟ್ಟಾಗಿ 85% ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿವೆ.

ಕೇರಳವು 95 ಸಕ್ರಿಯ ಪ್ರಕರಣಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ತಮಿಳುನಾಡಿನಲ್ಲಿ 66 ಮತ್ತು ಮಹಾರಾಷ್ಟ್ರ 56 ಸಕ್ರಿಯ ಪ್ರಕರಣಗಳು ಇವೆ. ದೆಹಲಿ (23), ಪುದುಚೇರಿ (10), ಕರ್ನಾಟಕ (13), ಗುಜರಾತ್ (7), ರಾಜಸ್ಥಾನ (2), ಹರಿಯಾಣ (1), ಸಿಕ್ಕಿಂ (1), ಮತ್ತು ಪಶ್ಚಿಮ ಬಂಗಾಳ (1) ಸೇರಿವೆ.

ಮೇ 12 ರಿಂದ ಭಾರತದಲ್ಲಿ 164 ಹೊಸ ಪ್ರಕರಣಗಳು ದಾಖಲಾಗಿವೆ. ಹೆಚ್ಚಿನ ಪ್ರಕರಣಗಳು ಸೌಮ್ಯವಾಗಿದ್ದು, ಸೋಂಕಿತರು ಆಸ್ಪತ್ರೆಗೆ ದಾಖಲಾಗಿಲ್ಲ. ಸಿಂಗಾಪುರ ಮತ್ತು ಹಾಂಕಾಂಗ್‌ನಲ್ಲಿ ಕೊರೊನಾದ ರೂಪಾಂತರಿ ಒಮಿಕ್ರಾನ್ ಜೆಎನ್‌1 ಉಪ ತಳಿಗಳಾದ ಎನ್‌ಬಿ.1.8 ಮತ್ತು ಎಲ್‌ಎಫ್‌.7 ಹಾವಳಿ ಹೆಚ್ಚಾಗಿದೆ.