



ಡೈಲಿ ವಾರ್ತೆ: 25/MAY/2025


ರಾಮಾಯಣ, ಮಹಾಭಾರತ ಕಾಲದಲ್ಲಿ ಮಾವಿನ ಹಣ್ಣಿನ ಉಲ್ಲೇಖ: ರಾಜೇಂದ್ರ ಸಿಂಗ್

ವಿದ್ಯಾಧರ ಮೊರಬಾ
ಅಂಕೋಲಾ : ರಾಮಾಯಣ, ಮಹಾಭಾರತ ಕಾಲದಲ್ಲಿ ಮಾವಿನ ಹಣ್ಣಿನ ಕುರಿತು ಉಲ್ಲೇಖಿಸಲಾಗಿದೆ. ಮಾವಿನ ಹಣ್ಣು ಪ್ರೀತಿಯ ಸಂಕೇತ, ಮಾವು ಸಮೃದ್ಧ ಪ್ರೋಟಿಕಾಂಶ ಒಳಗೊಂಡಿದೆ. ಅದರಲ್ಲೂ ವಿಶೇಷ ವಾಗಿ ರಾಜ್ಯದೆಲ್ಲೆಡೆ ಪ್ರಸಿದ್ಧಿ ಹೊಂದಿರುವ ಕರಿ ಇಷಾಡ ಮಾವಿನ ಹಣ್ಣಿಗೆ ಜಿಐ ಟ್ಯಾಗ ದೊರೆತಿದ್ದು ಜಗತ್ತಿ ನಾದ್ಯಂತ ಮಾನ್ಯತೆ ಪಡೆದುಕೊಂಡಿದೆ. ಮಾವು ಮೇಳ ಬೇಸಾಯಗಾರರಿಗೆ ಅತ್ಯುತ್ತಮ ಮಾಹಿತಿ ನೀಡುವ ಜತೆಯಲ್ಲಿ ಇತರರಿಗೂ ಮಾದರಿಯಾಗಿದೆ ಎಂದು ಚಲನ ಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಳಿದರು.
ಪಟ್ಟಣದ ಜೈಹಿಂದ್ ಹೈಸ್ಕೂಲ್ ಆವರಣದಲ್ಲಿ ಬೆಳೆಗಾರರ ಸಮಿತಿಯವರು ಆಯೋಜಿಸಿದ ಮೂರನೇ ವರ್ಷದ ಮಾವು ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಪ್ರಶಸ್ತಿ ಪುರಸ್ಕೃತ, ನಾಟಿ ವೈದ್ಯ ಹನುಮಂತ ಬಿ. ಗೌಡ ಮಾತನಾಡಿ, ಕರಿ ಇಷಾಡ ಮಾವಿನ ಬೇಸಾಯಗಾರರಿಗೆ ಪ್ರೋತ್ಸಾಹಿಸುವುದರೊಂದಿಗೆ ಚಾಲ್ತಿ ಮಾವಿನ ಮರಗಳನ್ನು ಉಳಿಸಿ ಬೆಳೆಸಿಕೊಳ್ಳುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಮಾವು ಮೇಳ ಪರಿಣಾಮಕಾರಿ ಪಾತ್ರ ನಿರ್ವಹಿಸಿದು, ಮಾವಿನ ಹಣ್ಣಿನ ಮೌಲ್ಯವರ್ಧನೆಯಾಗಬೇಕಿದೆ ಎಂದರು.

ಮಾವು ಬೆಳೆದಾರರ ಸಮಿತಿಯ ಅಧ್ಯಕ್ಷ ನಾಗರಾಜ ನಾಯಕ ಮಾತನಾಡಿ, ಕಳೆದ ಮೂರು ವರ್ಷ ಗಳಿಂದ ಆಯೋಜಿಸುತ್ತಿರುವ ಮಾವು ಮೇಳಕ್ಕೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಜೈಹಿಂದ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂಜಯ ಕಾಮತ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಬೆಳೆಗಾರರ ಸಮಿತಿ ಗೌರವಾಧ್ಯಕ್ಷರಾದ ಭಾಸ್ಕರ ನಾರ್ವೇಕರ, ದೇವರಾಯ ನಾಯಕ, ಕಸಾಪ ತಾಲೂಕ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಜಿ.ಆರ್.ತಾಂಡೇಲ, ಕೃಷ್ಣಮೂರ್ತಿ ನಾಯಕ ವಂದಿಗೆ, ಮಹಾಂತೇಶ ರೇವಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಳೆಗಾರರ ಸಮಿತಿ ಕಾರ್ಯದರ್ಶಿ ರಾಮಚಂದ್ರ ಹೆಗಡೆ ಕುಂಟಕಣಿ ಪ್ರಾಸ್ತಾವಿಕ ಮಾತನಾಡಿದರು. ಸದಸ್ಯ ರಾದ ಮಹಾದೇವ ಗೌಡ ಬೆಳಂಬಾರ, ಶಂಕರ ಗೌಡ ಅಡ್ಲೂರು ಸಹಕರಿಸಿದರು. ಜಗದೀಶ ಜಿ.ನಾಯಕ ಹೊಸ್ಕೇರಿ, ಬಾಲಚಂದ್ರ ಶೆಟ್ಟಿ ನಿರ್ವಹಿಸಿದರು. ಬಾಸಗೋಡ ಆಗೇರ ಸಮಾಜದ ಪಂಚವಾದ್ಯದ ಮೂಲಕ ಗಮನ ಸೆಳೆದರು. ವಿಚಾರ ಸಂಕಿರಣದಲ್ಲಿ ಚಾಲ್ತಿ ಮಾವು ಕುರಿತು ಪರಿಸರ ತಜ್ಞರಾದ ಶಿವಾನಂದ ಕಳವೆ ಉಪನ್ಯಾಸ ನೀಡಿದರು.