ಡೈಲಿ ವಾರ್ತೆ: 18/JUNE/2025

ಟೋಲ್ ಕಿರಿಕ್‌ಗೆ ಬ್ರೇಕ್|
ಜನರಿಗೆ ಗುಡ್ ನ್ಯೂಸ್ – ಮೂರು ಸಾವಿರಕ್ಕೆ ವಾರ್ಷಿಕ ಟೋಲ್‌ ಪಾಸ್‌!
ಆಗಸ್ಟ್ 15 ರಿಂದ ಜಾರಿ – ಗಡ್ಕರಿ

ನವದೆಹಲಿ: ಟೋಲ್ ಕಿರಿ ಕಿರಿಗೆ ಬ್ರೇಕ್ ಹಾಕಲು ಫಾಸ್ಟ್ ಟ್ಯಾಗ್ ಆಧಾರಿತ ಪಾಸ್‌ ಅನ್ನು ಜಾರಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

3 ಸಾವಿರ ರೂಪಾಯಿಗೆ ವಾರ್ಷಿಕ ಟೋಲ್‌ ಪಾಸ್‌ ನೀಡಲು ಸರ್ಕಾರ ಮುಂದಾಗಿದ್ದು, ಆಗಸ್ಟ್ 15 ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಹೆದ್ದಾರಿ ಖಾತೆಯ ಸಚಿವ ನಿತಿನ್‌ ಗಡ್ಕರಿ ಘೋಷಿಸಿದ್ದಾರೆ.

ನಿತಿನ್‌ ಗಡ್ಕರಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಫಾಸ್ಟ್‌ ಟ್ಯಾಗ್‌ ಆಧರಿತ ವಾರ್ಷಿಕ ಪಾಸ್‌ ಬಗ್ಗೆ ವಿವರವನ್ನು ಹಂಚಿಕೊಂಡಿದ್ದಾರೆ.

ಗಡ್ಕರಿ ಹೇಳಿದ್ದೇನು?
ನಾವು 3 ಸಾವಿರ ರೂ.ಗೆ ಫಾಸ್ಟ್‌ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಅನ್ನು ಪರಿಚಯಿಸುತ್ತಿದ್ದು ಆಗಸ್ಟ್ 15, 2025 ರಿಂದ ಜಾರಿಗೆ ಬರುತ್ತದೆ. ಸಕ್ರಿಯಗೊಳಿಸಿದ ದಿನಾಂಕದಿಂದ ಒಂದು ವರ್ಷ ಅಥವಾ 200 ಟ್ರಿಪ್‌ಗಳವರೆಗೆ ಮಾನ್ಯವಾಗಿರುತ್ತದೆ.

ಈ ಪಾಸ್ ಅನ್ನು ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳಂತಹ ವಾಣಿಜ್ಯೇತರ ಖಾಸಗಿ ವಾಹನಗಳಿಗೆ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿದೆ. ನವೀಕರಣಕ್ಕಾಗಿ ಮೀಸಲಾದ ಲಿಂಕ್ ಅನ್ನು ಶೀಘ್ರದಲ್ಲೇ ರಾಜ್‌ಮಾರ್ಗ್ ಯಾತ್ರಾ ಅಪ್ಲಿಕೇಶನ್‌ನಲ್ಲಿ ಹಾಗೂ NHAI ಮತ್ತು MoRTH ನ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ.

ಈ ಪಾಸ್‌ನಿಂದ 60 ಕಿ.ಮೀ ವ್ಯಾಪ್ತಿಯೊಳಗೆ ಇರುವ ಟೋಲ್ ಪ್ಲಾಜಾಗಳಿಗೆ ಸಂಬಂಧಿಸಿದ ದೀರ್ಘಕಾಲದ ಸಮಸ್ಯೆಗಳು ಪರಿಹಾರವಾಗಲಿದೆ. ಟೋಲ್‌ಗಳಲ್ಲಿ ಕಾಯುವ ಸಮಯ ಮತ್ತು ದಟ್ಟಣೆ ಕಡಿಮೆ ಯಾಗಲಿದೆ.

ಟೋಲ್ ಪ್ಲಾಜಾಗಳಲ್ಲಿ ವಿವಾದಗಳು ಕಡಿಮೆಯಾಗಲಿದ್ದು ಲಕ್ಷಾಂತರ ಖಾಸಗಿ ವಾಹನ ಮಾಲೀಕರಿಗೆ ಸುಗಮ ಪ್ರಯಾಣದ ಅನುಭವವನ್ನು ವಾರ್ಷಿಕ ಪಾಸ್ ನೀಡಲಿದೆ.