



ಡೈಲಿ ವಾರ್ತೆ: 23/JUNE/2025


ಓವರ್ ಟೇಕ್ ಮಾಡಿದ್ದಕ್ಕೆ ಹಲ್ಲೆ ಆರೋಪ: ಮಾಜಿ ಕೇಂದ್ರ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಸೇರಿ ಮೂವರ ವಿರುದ್ಧ FIR ದಾಖಲು

ಬೆಂಗಳೂರು: ಕಾರು ಓವರ್ ಟೇಕ್ ಮಾಡಿದ್ದಕ್ಕೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಬಿಜೆಪಿ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಸೇರಿ ಮೂವರ ವಿರುದ್ಧ ದಾಬಸ್ಪೇಟೆಯಲ್ಲಿ ಪ್ರಕರಣ ದಾಖಲಾಗಿದೆ.
ಓವರ್ಟೇಕ್ ವಿಚಾರವಾಗಿ ನೆಲಮಂಗಲದ ಹಳೇ ನಿಜಗಲ್ ಬಳಿ ಕಾರು ಅಡ್ಡಗಟ್ಟಿ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಸಲ್ಮಾನ್, ಸೈಫ್, ಇಲಿಯಾಜ್, ಗುಲಷಿರ್ ಉನ್ನೀಸಾ ಎಂಬವರು ದೂರು ದಾಖಲಿಸಿದ್ದಾರೆ. ಈ ಬೆನ್ನಲ್ಲೇ ಹೆಗಡೆ ಕಾರಿನಲ್ಲಿದ್ದ ನಾಲ್ವರನ್ನೂ ನೆಲಮಂಗಲ ಡಿವೈಎಸ್ಪಿ ಕಚೇರಿಯಲ್ಲಿ ವಿಚಾರಣೆ ನಡೆಸಲಾಗಿದೆ.
ಅನಂತ್ ಕುಮಾರ್ ಹೆಗಡೆ ಅವರಿಗೆ ಬೆದರಿಕೆ ಇರುವ ಕಾರಣ ಗನ್ ತೆಗೆದಿರೋದಾಗಿ ಗನ್ಮ್ಯಾನ್ ಶ್ರೀಧರ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ದಾಬಸ್ ಪೇಟೆ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ.
ಘಟನೆ ಸಂಬಂಧ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿಕೆ ಬಾಬಾ ಪ್ರತಿಕ್ರಿಯಿಸಿ, ಅನಂತ್ಕುಮಾರ್ ಹೆಗಡೆ ಸೇರಿದಂತೆ ಮೂವರ ಮೇಲೆ ಎಫ್ಐಆರ್ ದಾಖಲಾಗಿದೆ, ಎ.1 ಅನಂತ್ಕುಮಾರ್ ಹೆಗಡೆ, ಎ2 ಗನ್ ಮ್ಯಾನ್, ಎ3- ಚಾಲಕ ಆರೋಪಿಗಳಾಗಿದ್ದಾರೆ. ತನಿಖೆ ಮಾಡಿ ಅಗತ್ಯವಿದ್ದರೆ ಬಂಧಿಸುತ್ತೆವೆ. ಇದರೊಂದಿಗೆ ಗಾಯಾಳುಗಳ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.