



ಡೈಲಿ ವಾರ್ತೆ: 25/JUNE/2025


ಬೆಂಗಳೂರಿನಲ್ಲಿ ಮನಕಲಕುವ ಘಟನೆ: ಪುತ್ರ ವೃದ್ಧಾಶ್ರಮ ಸೇರಿಸಿದ್ದಕ್ಕೆ ನೊಂದು ವೃದ್ಧ ದಂಪತಿ ಆತ್ಮಹತ್ಯೆಗೆ ಶರಣು

ಬೆಂಗಳೂರು: ತಂದೆ, ತಾಯಿ ಮಕ್ಕಳಿಗೆ ಕೈತುತ್ತು ನೀಡಿ, ಸಾಕಿ ಸಲುಹಿ ದೊಡ್ಡವರನ್ನಾಗಿ ಮಾಡುತ್ತಾರೆ. ಎದೆ ಎತ್ತರಕ್ಕೆ ಬೆಳೆದು ನಿಂತ ಮಕ್ಕಳು ಮುಪ್ಪಿನ ಕಾಲದಲ್ಲಿ ನಮ್ಮನ್ನು ನೋಡಿಕೊಳ್ಳುತ್ತಾರೆ ಅಂತ ತಂದೆ, ತಾಯಿ ಅಂದುಕೊಂಡಿರುತ್ತಾರೆ. ಆದರೆ, ಕೆಲ ಮಕ್ಕಳು ವೃದ್ಧ ತಂದೆ, ತಾಯಿಯನ್ನು ನೋಡಿಕೊಳ್ಳುವ ಬದಲಿಗೆ ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ. ಪುತ್ರ ವೃದ್ಧಾಶ್ರಮಕ್ಕೆ ಸೇರಿಸಿದ್ದಕ್ಕೆ ಮನನೊಂದ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಜೆ.ಪಿ.ನಗರದ 8ನೇ ಹಂತದಲ್ಲಿ ನಡೆದಿದೆ.
ಮೃತ ದಂಪತಿಗಳು ಕೃಷ್ಣಮೂರ್ತಿ(81), ರಾಧಾ (74) ಎಂದು ತಿಳಿದುಬಂದಿದೆ.
ಸೊಸೆ ಮಾಡಿದ ಅಡುಗೆ ಇಷ್ಟವಿಲ್ಲ, ಹೊಂದಾಣಿಕೆಯಾಗದ ಕಾರಣ ಬೇರ ಮನೆ ಮಾಡಿಕೊಡುವಂತೆ ಮಗನಿಗೆ ತಂದೆ, ತಾಯಿ ಕೇಳಿದ್ದರು. ಆದರೆ, ಪುತ್ರ 2021ರಲ್ಲಿ ತಂದೆ, ತಾಯಿಯನ್ನು ಬ್ಯಾಟರಾಯನಪುರದ ವೃದ್ಧಾಶ್ರಮಕ್ಕೆ ಸೇರಿಸಿದ್ದನು. 2023ರಲ್ಲಿ ತಂದೆ, ತಾಯಿಯನ್ನು ವಾಪಸ್ ಮನೆಗೆ ಕರೆದುಕೊಂಡು ಬಂದಿದ್ದನು. ವೃದ್ಧಾಶ್ರಮದಿಂದ ವಾಪಸ್ ಬಂದ ನಂತರ ವೃದ್ಧ ದಂಪತಿಗೆ ಮನೆಯಲ್ಲಿ ಹೊಂದಾಣಿಕೆಯಾಗಿರಲಿಲ್ಲ. ಹೀಗಾಗಿ, ಕಳೆದ ತಿಂಗಳು ಮತ್ತೆ ಬನಶಂಕರಿ ನಗರದಲ್ಲಿರುವ ವೃದ್ಧಾಶ್ರಮಕ್ಕೆ ತಂದೆ, ತಾಯಿಯನ್ನು ಪುತ್ರ ಸೇರಿಸಿದ್ದನು. ಆದರೆ, ವೃದ್ಧ ದಂಪತಿ ಮೊನ್ನೆ ಬೆಳಿಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆ ಪೊಲೀಸರು ಅಸ್ವಾಭಾವಿಕ ಸಾವು (UDR) ಎಂದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಆದರೆ, ಟಿವಿ ನೋಡುವ ವಿಚಾರಕ್ಕೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು ಎಂದು ವೃದ್ಧಾಶ್ರಮದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.