



ಡೈಲಿ ವಾರ್ತೆ: 25/JUNE/2025


ಬಂಟ್ವಾಳ| ಪಂಚಾಯತ್ ಸಭಾಂಗಣದಲ್ಲಿ ರಾಜಕೀಯ ಪಕ್ಷದ ಸಭೆಗೆ ಅವಕಾಶ ನೀಡಿದ ಆರೋಪ: ಇಡ್ಕಿದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಮಾನತು!

ಬಂಟ್ವಾಳ : ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ರಾಜಕೀಯ ಸಭೆ ನಡೆಸಲು ಅವಕಾಶ ನೀಡಿದ ಆರೋಪದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಅಮಾನತು ಮಾಡಿ ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ.
ಜೂ.23ರಂದು ಇಡ್ಕಿದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ರಾಜಕೀಯ ಪಕ್ಷವೊಂದರ ಸಭೆಯನ್ನು ನಡೆಸಲು ಪಂಚಾಯತ್ ಪಿಡಿಒ ಗೋಕುಲ್ ದಾಸ್ ಭಕ್ತ ಅವಕಾಶ ಕಲ್ಪಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕರ್ನಾಟಕ ನಾಗರೀಕ ಸೇವಾ ನಡತೆ ನಿಯಮವನ್ನು ಉಲ್ಲಂಘಿಸಿ ಕರ್ತವ್ಯದಲ್ಲಿ ನಿರ್ಲಕ್ಷ್ಯತೆಯನ್ನು ತೋರಿರುವ ಹಿನ್ನೆಲೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲ್ದಾಸ್ ಭಕ್ತ ರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿರವರು ಅಭಿವೃದ್ಧಿ ಅಧಿಕಾರಿರವರಿಗೆ ಕಾರಣ ಕೇಳಿ ನೋಟಿಸು ನೀಡಿದ್ದು, ಸದರಿ ನೋಟಿಸಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯತ್ ಕಛೇರಿ ಸಭಾಂಗಣದಲ್ಲಿ ರಾಜಕೀಯ ಸಭೆ ನಡೆಸಿರುವುದು ತನ್ನ ಗಮನಕ್ಕೆ ಬಂದಿರುವುದಿಲ್ಲ ಎಂಬುದಾಗಿ ಸಮಜಾಯಿಷಿಯನ್ನು ನೀಡಿರುತ್ತಾರೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ನೀಡಿರುವ ಸಮಜಾಯಿಷಿಕೆಯು ಒಪ್ಪತಕ್ಕದ್ದಲ್ಲ. ಸರ್ಕಾರಿ ಕಛೇರಿಯಲ್ಲಿ ಯಾವುದೇ ರಾಜಕೀಯ ಪಕ್ಷಗಳ ಸಭೆ ಸಮಾರಂಭಗಳಿಗೆ ಅವಕಾಶ ನೀಡುವುದು ಸಮಂಜಸವಲ್ಲ. ಇದಕ್ಕೆ ಅವಕಾಶ ನೀಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಉಲ್ಲೇಖಿಸಿ ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್ ಅವರು ವರದಿ ಸಲ್ಲಿಸಿದ್ದರು.
ವರದಿಯನುಸಾರ ಇಡ್ಕಿದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲ್ದಾಸ್ ಭಕ್ತ ಅವರನ್ನು ಕರ್ನಾಟಕ ಸರಕಾರಿ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957ರ 10ನೇ ನಿಯಮದ (1)(ಡಿ) ಉಪನಿಯಮದಂತೆ ಸೇವೆಯಿಂದ ಅಮಾನತುಗೊಳಿಸುವುದು ಸೂಕ್ತವೆಂದು ಶಿಸ್ತು ಪ್ರಾಧಿಕಾರವು ತೀರ್ಮಾನಿಸಿ ಈ ಆದೇಶ ಹೊರಡಿಸಿದೆ.